ಸುಳ್ಯ, ಜೂ. ೮: ಇಲ್ಲಿನ ಮೊಗರ್ಪಣೆಯಲ್ಲಿ ಭಾನುವಾರ ರಾತ್ರಿ ನಡೆದ ಶೂಟೌಟ್ ಪ್ರಕರಣದ ಎಲ್ಲಾ ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿಯೂ ಮತ್ತು ಪ್ರಕರಣಕ್ಕೆ ಬಳಸಿದ ಕೊಡಗು ನೋಂದಣಿ ಸಂಖ್ಯೆ ಹೊಂದಿದ್ದ ಸ್ಕಾರ್ಪಿಯೋ ವಾಹನವನ್ನೂ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರು ಮೊಗರ್ಪಣೆ ವೆಂಕಟರಮಣ ಸೊಸೈಟಿಯ ಬಳಿ ತನ್ನ ಕಾರಿಗೆ ಹತ್ತುತ್ತಿರುವ ಸಂದರ್ಭದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ಅಪರಿಚಿತರು ಶೂಟ್ ಮಾಡಿ ಹೋಗಿದ್ದರು. ಅದೃಷ್ಟವಶಾತ್ ಗುಂಡು ಶಾಹಿಗೆ ತಾಗದೆ ಕಾರಿಗೆ ತಾಗಿ ಕಾರು ಜಖಂ ಆಗಿತ್ತು.

ಶೂಟೌಟ್ ನಡೆಸಿದ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನ ಆರಂಭಿಸಿದ್ದರು. ಇದೀಗ ಶೂಟೌಟ್ ನಡೆಸಿದ ಶಂಕೆಯ ಮೇರೆಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದೆ.

ಸಂಪಾಜೆಯ ಬಾಲಚಂದ್ರ ಕಳಗಿಯವರ ಕೊಲೆ ಆರೋಪಿಗಳೂ ಸೇರಿ ಕೆಲವರು ಮಹಮ್ಮದ್ ಶಾಹಿ ಮೇಲೆ ಗುಂಡು ಹಾರಿಸಿದ್ದರೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಹೇಳಲಾಗಿದೆ. ಬಾಲಚಂದ್ರ ಕಳಗಿಯವರ ಹಂತಕರು ಹಾಗೂ ಮಹಮ್ಮದ್ ಶಾಹಿ ಮತ್ತು ಸ್ನೇಹಿತರಾಗಿದ್ದು, ಇದೀಗ ಸ್ನೇಹಿತರ ಮಧ್ಯೆ ಬಂದಿರುವ ಭಿನ್ನಾಭಿಪ್ರಾಯದಿಂದಾಗಿ ಈ ಕೃತ್ಯ ನಡೆದಿರಬಹುದಾದ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ ಎನ್ನಲಾಗಿದ್ದು, ಪೊಲೀಸರು ಆ ದಿಸೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಬಾಲಚಂದ್ರ ಕಳಗಿ ಅವರನ್ನು ೨೦೧೯ರ ಮಾರ್ಚ್ ೧೯ ರಂದು ಲಾರಿ ಹರಿಸಿ ಅಪಘಾತದಂತೆ ಬಿಂಬಿಸಿ ಕೊಲೆ ಮಾಡಲಾಗಿತ್ತು. ಈ ಕೊಲೆಯಲ್ಲಿ ಮೂವರನ್ನು ಬಂಧಿಸಲಾಗಿತ್ತು. ಅವರಲ್ಲಿ ಲಾರಿ ಹರಿಸಿದ್ದ ಮುಖ್ಯ ಆರೋಪಿ ಸಂಪತ್ ಕುಮಾರ್‌ನನ್ನು ಸುಳ್ಯದ ಶಾಂತಿ ನಗರದ ಮನೆಯಲ್ಲಿಯೇ ೨೦೨೦ರ ಅಕ್ಟೋಬರ್ ೮ ರಂದು ಬೆಳ್ಳಂಬೆಳಿಗ್ಗೆ ಐವರ ತಂಡವು ಮನೆಗೆ ನುಗ್ಗಿ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ಮರಳು ದಂಧೆಯಲ್ಲಿನ ವೈಷಮ್ಯದಿಂದಲೇ ಈ ಹತ್ಯೆ ಮಾಡಲಾಗಿತ್ತು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರು ಅಕ್ರಮ ಮರಳು ದಂಧೆಗೆ ಅಡ್ಡಿ ಪಡಿಸಿದ್ದರಿಂದ ಮತ್ತು ಕ್ಲಬ್ ನಡೆಸಲು ಮತ್ತು ವೈನ್ ಶಾಪ್ ತೆರೆಯಲು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿತ್ತು.

ಇದೀಗ ನಡೆದಿರುವ ಹತ್ಯೆಯೂ ಮರಳು ದಂಧೆಯ ವೈಷಮ್ಯದಿಂದಲೇ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಹತ್ಯೆ ಪ್ರಯತ್ನದಿಂದ ತಪ್ಪಿಸಿಕೊಂಡಿರುವ ಶಾಹಿ ಅವರೂ ಟಿಪ್ಪರ್‌ಗಳನ್ನು ಹೊಂದಿದ್ದು ಮರಳು ವ್ಯಾಪಾರ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ. ತನಿಖೆ ನಡೆಯುತ್ತಿರುವುದರಿಂದ ಬಂಧಿತರ ಕುರಿತು ಮಾಹಿತಿ ನೀಡುವುದಿಲ್ಲ ಎಂದ ಸುಳ್ಯ ಪೊಲೀಸ್ ಅಧಿಕಾರಿಗಳು ತನಿಖೆ ನಂತರ ಪೂರ್ಣ ವಿವರ ನೀಡುವುದಾಗಿ ತಿಳಿಸಿದ್ದಾರೆ.

-ಕೋವರ್ ಕೊಲ್ಲಿ ಇಂದ್ರೇಶ್