ಕೂಡಿಗೆ, ಜೂ. ೮: ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ರೈತರು ಮಳೆ ಆಧಾರಿತವಾಗಿ ಮುಸುಕಿನ ಜೋಳವನ್ನು ಬೆಳೆಯುವುದರಿಂದ ಈ ಸಾಲಿನಲ್ಲಿ ಎರಡು ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲಿ ವಿವಿಧ ಹೈಬ್ರಿಡ್ ತಳಿಯ ಮುಸುಕಿನ ಬಿತ್ತನೆ ಜೋಳ ದಾಸ್ತಾನಿದ್ದು, ರೈತರಿಗೆ ಸರಕಾರ ನಿಗದಿಪಡಿಸಿದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಯಾದವ್ ಬಾಬು ಮನವಿ ಮಾಡಿದ್ದಾರೆ.

ಈ ಸಾಲಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಪರಿಷ್ಕರಿಸಿದ ವಿವಿಧ ಕಂಪೆನಿಯ ಹೈಬ್ರಿಡ್ ತಳಿಯ ಮುಸುಕಿನ ಬಿತ್ತನೆ ಜೋಳವನ್ನು ಮಾರಾಟ ಮಾಡಲಾಗುತ್ತಿದೆ.

ರಿಯಾಯಿತಿ ದರದಲ್ಲಿ ಸಿ.ಪಿ. ೮೧೮, ಗಂಗಾ ಕಾವೇರಿ, ೩೧೬೪, ಕಾವೇರಿ ೨೫ ಏ ೫೫. ನಿಗದಿಯ ದರದಲ್ಲಿ ಹೈಟಜ್ ೫೧೦೯, ಪೋನಿರ್, ಎಡಿವಿ ೯೨೯೩, ರಾಯಲ್ ಗೋಲ್ಡ್, ಶ್ರೀ ಅಜನ್, ಎಲ್‌ಜಿ ೫೧೧, ಅಂಕೂರ್ ಭಾಸ್ಕರ್ ಎಂಬ ತಳಿಗಳು ಸಹಕಾರ ಸಂಘಗಳಲ್ಲಿ ದಾಸ್ತಾನಿವೆ. ರೈತರು ಇದರ ಸೌಲಭ್ಯಗಳನ್ನು ಪಡೆದುಕೊಳ್ಳವುದರ ಜೊತೆಗೆ ತಮ್ಮ ಜಮೀನಿನ ಮಣ್ಣಿನ ಆಧಾರದ ಮೇಲೆ ಮತ್ತು ಅದಕ್ಕೆ ಅನುಗುಣವಾದ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬಹುದಾಗಿದೆ. ಅದರಂತೆಯೇ ಕೂಡಿಗೆಯಲ್ಲಿರುವ ಮಣ್ಣು ಆರೋಗ್ಯ ಕೇಂದ್ರದ ಜಮೀನಿನಲ್ಲಿ ಮಣ್ಣನ್ನು ಪರೀಕ್ಷೆ ಮಾಡಿಕೊಂಡು ಅದರ ಆಧಾರದ ಮೇಲೆ ಸಾವಯವ ಗೊಬ್ಬರ ಮತ್ತು ಮಣ್ಣಿನ ಅನುಗುಣಕ್ಕೆ ಬೇಕಾಗುವ ಗೊಬ್ಬರವನ್ನು ಸಕಾಲದಲ್ಲಿ ಬಳಕೆ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ.

ಈಗಾಗಲೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಭೂಮಿಯು ಉಳುಮೆಗೆ ಹದವಾಗಿದ್ದು, ಬಿತ್ತನೆ ಮಾಡಲು ಬೇಕಾಗುವ ರೀತಿಯಲ್ಲಿ ರೈತರು ಉಳುಮೆ ಮಾಡಿ ಅದಕ್ಕೆ ಸಾವಯವ ಗೊಬ್ಬರ ಸೇರಿದಂತೆ ರೋಗ ನಿರೋಧಕ ಶಕ್ತಿಯ ಗೊಬ್ಬರವನ್ನು ಹಾಕಿ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ಮೂಲಕ ಬೇಸಾಯ ಮಾಡಲು ಸಿದ್ಧರಾಗಿದ್ದಾರೆ.

ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ೧೫ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಳೆ ಆಧಾರಿತವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಜೋಳ ಬಿತ್ತನೆ ಕಾರ್ಯವನ್ನು ಅರಂಭಿಸಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಯಾದವ್ ಬಾಬು ತಿಳಿಸಿದ್ದಾರೆ.