ಕೂಡಿಗೆ, ಜೂ. ೮: ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿಯೋರ್ವ ನಿನ್ನೆ ಬೆಳಿಗ್ಗೆ ಶಾಲೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ. ನಿನ್ನೆ ಸಂಜೆ ೮ ಗಂಟೆಯ ಸಮಯದಲ್ಲಿ ಬೆಂಗಳೂರಿನ ಚಂದ್ರು ಲೇಔಟ್ ಠಾಣೆಯ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾನೆ.

ಮಂಗಳವಾರ ಬೆಳಿಗ್ಗೆ ಶಾಲೆಯಿಂದ ಹೊರಗೆ ಹೋಗಿ ನಂತರ ವೀರಾಜಪೇಟೆ ಸಮೀಪ ಬಿಟ್ಟಂಗಾಲ ಗ್ರಾಮದ ನೆಂಟರ ಮನೆಗೆ ತೆರಳಿದ್ದಾನೆ. ಅವರ ಮನೆ ಬಾಗಿಲು ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಮೈಸೂರಿಗೆ ಹೋಗಿ ನಂತರ ಕಾರು ಮೂಲಕ ಬೆಂಗಳೂರಿಗೆ ಹೋಗಿರುವುದಾಗಿ ತಿಳಿದುಬಂದಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಚಂದ್ರ ಲೇಔಟ್ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಅಲ್ಲಿನ ಠಾಣಾಧಿಕಾರಿ ವಿಚಾರಣೆ ನಡೆಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿದ ನಂತರ ವಿದ್ಯಾರ್ಥಿಯ ತಂದೆ ಮತ್ತು ಹಾಸ್ಟೆಲ್‌ನ ವಾರ್ಡ್ನ್ ಬೆಂಗಳೂರಿಗೆ ತೆರಳಿ ಅಲ್ಲಿಂದ ಕರೆತಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿದ್ಯಾರ್ಥಿಯಿಂದ ತಪ್ಪು ಒಪ್ಪಿಗೆ ಪತ್ರ ಬರೆಸಿಕೊಂಡು ವಿದ್ಯಾರ್ಥಿಯ ಪೋಷಕರಿಗೆ ಒಪ್ಪಿಸಲಾಗಿದೆ.