ಮಡಿಕೇರಿ, ಜೂ. ೮: ಆರ್ಥಿಕವಾಗಿ ಹಿಂದುಳಿದಿರುವ ಮೊಗೇರ ಸಮಾಜ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಕರೆ ನೀಡಿದರು.
ಸೋಮವಾರಪೇಟೆ ತಾಲೂಕಿನ ಬಜೆಗುಂಡಿಯ ಕುಸುಬೂರ್ ಗ್ರಾಮದಲ್ಲಿ ೧ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಮೊಗೇರ ಸೇವಾ ಸಮಾಜದ ಗ್ರಾಮ ಸಮಿತಿ ವತಿಯಿಂದ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು. ಪೋಷಕರು ಮಕ್ಕಳ ಕಲಿಕೆ ಮತ್ತು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಆಸಕ್ತಿಯ ಕ್ರೀಡೆಯಲ್ಲಿ ಸ್ಪರ್ಧಿಸಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಮೊಗೇರ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ. ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯ ನಿರ್ದಿಷ್ಟ ಗುರಿ ಇರಬೇಕು, ಆ ಮೂಲಕ ಉನ್ನತ ಶಿಕ್ಷಣ ಮತ್ತು ಹುದ್ದೆಯ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳಬೇಕು. ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮೊಗೇರ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ. ದಾಮೋದರ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಹಾಗೂ ೧೨ನೇ ಹಾಕಿ ಸಬ್ ಜೂನಿಯರ್ ಮಹಿಳಾ ರಾಷ್ಟಿçÃಯ ಚಾಂಪಿಯನ್ ಶಿಪ್‌ನಲ್ಲಿ ಸ್ಪರ್ಧಿಸಿದ ಕುಸುಬೂರು ಗ್ರಾಮದ ಜಗದೀಶ್ ಅವರ ಪುತ್ರಿ ಜೆ. ರಶ್ಮಿತಾ ಹಾಗೂ ಮನೋಜ್ ಅವರ ಪುತ್ರಿ ಎಂ.ಈ. ರಶ್ಮಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಪಿ.ಕೆ. ಚಂದ್ರು ಮಾತನಾಡಿದರು. ಸ್ಥಳೀಯ ಗ್ರಾ.ಪಂ. ಸದಸ್ಯೆ ಸುಧಾ ಗಣೇಶ್, ಸಮಾಜದ ತಾಲೂಕು ಉಪಾಧ್ಯಕ್ಷ ರಾಮಚಂದ್ರ, ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ಇದೇ ಸಂದರ್ಭ ಕುಸುಬೂರು ಗ್ರಾಮ ಸಮಿತಿಯನ್ನು ಪುನರ್ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ನಾರಾಯಣ, ಉಪಾಧ್ಯಕ್ಷರಾಗಿ ಶಿವಾನಂದ, ಕಾರ್ಯದರ್ಶಿಯಾಗಿ ಅಶ್ವಿನಿ ಹಾಗೂ ಖಜಾಂಚಿಯಾಗಿ ಪ್ರಮೀಳ ಅವರನ್ನು ನೇಮಕ ಮಾಡಲಾಯಿತು.