ಕುಶಾಲನಗರ, ಜೂ. ೮: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಗಾಯತ್ರಿ, ಸಿಂಚನ, ವಿಶ್ವಾಸ್, ರಾಹುಲ್ ಮತ್ತು ಕಾವ್ಯ ಅವರುಗಳನ್ನು ಕುಶಾಲನಗರ ಪೃಥ್ವಿ ಜ್ಯುವೆಲ್ಲರ್ಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ನಿವೃತ್ತ ಪ್ರಾಂಶುಪಾಲ ಲಿಂಗಮೂರ್ತಿ, ಸಮಾಜ ಸೇವಕಿ ಕಮಲಾ ಕರಿಯಪ್ಪ ಮತ್ತು ಪೃಥ್ವಿ ಜುವೆಲ್ಲರ್ ಸಂಸ್ಥೆಯ ಪ್ರಮುಖರಾದ ರೆಹಮತ್ ಆಲಿ, ಮಹೇಶ್ ಮತ್ತಿತರರು ಇದ್ದರು.

ಮಡಿಕೇರಿ, ಜೂ. ೮: ಚೇರಂಬಾಣೆ ಕೊಟ್ಟೂರಿನ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ೨೦೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ೬೨೫ಕ್ಕೆ ೬೨೨ ಅಂಕಗಳನ್ನು ಗಳಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸೋನಿಕಾ ಕೆ.ಎ. ಅವರನ್ನು ಐಚೆಟ್ಟೀರ ವಸಂತ ಅವರ ಜ್ಞಾಪಕಾರ್ಥವಾಗಿ ನೆನಪಿನ ಕಾಣಿಕೆ ಹಾಗೂ ರೂ. ೫ ಸಾವಿರ ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹತ್ತನೆ ತರಗತಿಯಲ್ಲಿ ೬೦೦ಕ್ಕೂ ಅಧಿಕ ಅಂಕಗಳನ್ನುಗಳಿಸಿದ ರಾಜರಾಜೇಶ್ವರಿ ಶಾಲೆಯ ಇತರ ಹದಿನೈದು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕ ನಾಟೋಳಂಡ ವಿಜು, ಶಾಲಾ ಮುಖ್ಯ ಶಿಕ್ಷಕ ಕುದುಪಜೆ ಕವನ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.