ಗೋಣಿಕೊಪ್ಪ ವರದಿ, ಜೂ. ೮: ವೈದ್ಯಕೀಯ ಸೇವೆ ಪಡೆದುಕೊಳ್ಳಲು ಗಿರಿಜನರಲ್ಲಿ ಇಚ್ಚಾಶಕ್ತಿ ಅಗತ್ಯ ಎಂದು ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ದೇವೆಂದ್ರ ರಮೇಶ್ ಸಲಹೆ ನೀಡಿದರು.
ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ಕೆ. ಬಾಡಗ ಗ್ರಾಮದಲ್ಲಿರುವ ಹೊಸಕೊಲ್ಲಿ ಹಾಡಿಯಲ್ಲಿ ಆಯೋಜಿಸಿದ್ದ ಕಲಿಕಾ ಹಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರ ಎಲ್ಲ ರೀತಿಯ ಆರೋಗ್ಯ ರಕ್ಷಣೆಗೆ ಯೋಜನೆ ರೂಪಿಸಿಕೊಂಡಿದೆ. ಆದರೆ, ಇದಕ್ಕೆ ಗಿರಿಜನರ ಸಹಕಾರ ಕೂಡ ಅಗತ್ಯ. ಸೌಲಭ್ಯ ಪಡೆಯಲು ಆರೋಗ್ಯ ಇಲಾಖೆ ಕಾರ್ಯಕರ್ತರೊಂದಿಗೆ ಸಹಕಾರ ಅಗತ್ಯವಾಗಿದೆ. ನೂತನ ಸೌಲಭ್ಯವುಳ್ಳ ಆರೋಗ್ಯ ಸಲಕರಣೆ, ಚುಚ್ಚುಮದ್ದು, ಔಷಧ ಪಡೆಯಲು ಹಿಂದೇಟು ಹಾಕಬಾರದು. ರೋಗದ ಮುನ್ಸೂಚನೆ ಅರಿತು ತಪಾಸಣೆಗೆ ಮುಂದಾಗಬೇಕು ಎಂದರು ಸಲಹೆ ನೀಡಿದರು. ರಕ್ತಹೀನತೆ ಬಾರದಂತೆ ಜೀವನ ಶೈಲಿ ರೂಪಿಸಿಕೊಳ್ಳಬೇಕು. ಕ್ಷಯರೋಗ, ಬಾಯಿ ಕ್ಯಾನ್ಸರ್ ಸಮಸ್ಯೆಗಳು ಬಂದಾಗ ಆರಂಭದಲ್ಲಿಯೇ ವೈದ್ಯರನ್ನು ಭೇಟಿಯಾಗಬೇಕು. ಹೆದರುವ ಮನಸ್ಥಿತಿಯಿಂದ ಹೊರಬರಬೇಕು ಎಂದರು.
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಚಂದ್ರಶೇಖರ್ ಹೆಚ್ಐವಿ ಸೋಂಕು ಹರಡುವ ವಿಧಾನ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ವಿವೇಕಾನಂದ ಯೂತ್ ಮೂವ್ಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟಸ್ವಾಮಿ ಮಾತನಾಡಿ, ಮಹಿಳೆಯರಲ್ಲಿ ಜೀವನದ ಶಿಕ್ಷಣ ಕಲಿಸಲು ಇಂತಹ ಕಾರ್ಯಕ್ರಮಗಳನ್ನು ನಾವು ನಡೆಸುತ್ತಿದ್ದೇವೆ ಎಂದರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಧ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿದರು.
ಸುತ್ತಲಿನ ಮೂರು ಹಾಡಿಗಳ ೧೦ ಸ್ವಸಹಾಯ ಸಂಘಗಳ ಸದಸ್ಯರು ಒಂದಾಗಿ ಸಮಾಲೋಚನೆ ನಡೆಸಿದರು. ಹಾಡಿಗಳಲ್ಲಿನ ಸಮಸ್ಯೆ, ಸಂಘ ಚಟುವಟಿಕೆ, ಆರ್ಥಿಕ ಕ್ರೋಡೀಕರಣ, ಯೋಜನೆ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು. ಹಾಡಿಯ ಮಕ್ಕಳು ನೃತ್ಯ ಮಾಡಿ ಗಮನ ಸೆಳೆದರು. ಆರೋಗ್ಯ ಇಲಾಖೆಯಿಂದ ಹಾಡಿ ನಿವಾಸಿಗಳ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಯಿತು.
ಸ್ಥಳೀಯ ಗ್ರಾ.ಪಂ. ಸದಸ್ಯೆ ರಾಧಾ, ಹಾಡಿ ಮುಖಂಡ ಮಾಸ, ವಿವೇಕಾನಂದ ಯೂತ್ ಮೂವ್ಮೆಂಟ್ ತಾಲೂಕು ಸಂಯೋಜಕ ಬಸವರಾಜ್ ಇದ್ದರು.