ಶನಿವಾರಸಂತೆ, ಜೂ. ೯: ಪಟ್ಟಣದ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಪೂರ್ವಿ ಜಗದೀಶ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಸ್ತುತ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಪೂರ್ವಿ ಜಗದೀಶ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದಾಗ ೬೨೫ಕ್ಕೆ ೬೨೨ ಅಂಕಗಳೊAದಿಗೆ ರಾಜ್ಯಕ್ಕೆ ೪ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಬುಧವಾರ ಶಾಲೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿAದ ಫಲಿತಾಂಶ ಸಂದೇಶ ಬಂದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ವಿಚಾರ ತಿಳಿಸಿದ್ದಾರೆ.

ಪೂರ್ವಿ ಜಗದೀಶ್ ಶನಿವಾರಸಂತೆಯ ವಕೀಲ ಎಸ್.ವಿ. ಜಗದೀಶ್ ಹಾಗೂ ಉಪನ್ಯಾಸಕಿ ರಾಘವಿ ದಂಪತಿಯ ಪುತ್ರಿ. ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರಿಂದ ಸನ್ಮಾನಿತರಾದ ಸಂದರ್ಭ ನೀಡಿದ ಗೌರವಧನವನ್ನು ಪೂರ್ವಿ ಜಗದೀಶ್ ಸೈನಿಕರ ಕಲ್ಯಾಣ ನಿಧಿಗೆ ಸಮರ್ಪಿಸಿದ್ದಳು. ಉನ್ನತ ಶಿಕ್ಷಣ ಪಡೆದ ಬಳಿಕ ಭವಿಷ್ಯದಲ್ಲಿ ತಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಪೂರ್ವಿ ‘ಶಕ್ತಿ’ಗೆ ತಿಳಿಸಿದ್ದಾಳೆ.