ನಾಪೋಕ್ಲು, ಜೂ. ೭: ಮಳೆ ಇಲ್ಲದಿದ್ದರು ಮರಗಳ ಎಡೆಯಿಂದ ನೀರು ನಿರಂತರವಾಗಿ ಸುರಿಯುತ್ತಿರುವ ಕೌತುಕ ಬೆಟ್ಟಗೇರಿ ಸಮೀಪ ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ.

ಬೆಟ್ಟಗೇರಿ ಪಂಚಾಯಿತಿ ಕಾರುಗುಂದ - ಹೆರವನಾಡು ರಸ್ತೆಯ ಬೆಟ್ಟಗೇರಿಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ, ಮುಖ್ಯ ರಸ್ತೆಯ ಬಳಿಯಲ್ಲಿ ಭಾರೀ ಗಾತ್ರದ ಮರಗಳ ಎಡೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹನಿ ಒಂದಷ್ಟು ಪ್ರದೇಶವನ್ನು ಒದ್ದೆ ಮಾಡಿದೆ, ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿ ಆಶ್ಚರ್ಯವನ್ನುಂಟು ಮಾಡಿದೆ. ವಾರದ ಹಿಂದೆ ಮಳೆಯಾಗುತ್ತಿದ್ದ ಅವಧಿಯಲ್ಲಿ ಇದಾವುದೂ ಗೋಚರಿಸಿರಲಿಲ್ಲ. ಕಳೆದ ಕೆಲ ದಿನಗಳಿಂದ ಮಳೆ ಇಲ್ಲದ ಬಿಸಿಲ ವಾತಾವರಣ ನಡುವೆಯೂ, ರಸ್ತೆ ಬದಿಯ ಮರದ ಕೆಳಭಾಗ ರಸ್ತೆ ಒದ್ದೆಯಾಗಿ, ನೀರು ನಿಂತಿರುವುದನ್ನು ಗಮನಿಸಿದ ಕೆಲವರು ಪರಿಶೀಲಿಸಿದಾಗ, ಆ ಸಣ್ಣ ಪ್ರದೇಶದಲ್ಲಿ ತುಂತುರು ಮಳೆಯಾಗುತ್ತಿರುವುದನ್ನು ಗಮನಿಸಿದ್ದಾರೆ.

ವಿಷಯ ತಿಳಿದು ಬೆಟ್ಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ ಅವರು ಸ್ಥಳ ಪರಿಶೀಲಿಸಿ, ಹತ್ತು ದಿನಗಳಿಂದ ಮರದ ಕೆಳ ಭಾಗ ನೀರು ಹನಿ ಹನಿಯಾಗಿ ಬೀಳುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಇದು ಮರದಿಂದ ಬೀಳುತ್ತಿದೆಯೇ ಏನು ಎಂಬುದರ ಬಗ್ಗೆ ತಜ್ಞರು ಪರಿಶೀಲನೆ ನಡೆಸಬೇಕೆಂದು ತಿಳಿಸಿದ್ದಾರೆ. - ದುಗ್ಗಳ ಸದಾನಂದ