ಮಡಿಕೇರಿ, ಜೂ. ೭: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದಲ್ಲಿ ಕೇವಲ ಒಬ್ಬ ನಾಯಕನಾಗಿ ಆಡಳಿತ ನಡೆಸದೆ, ಮುತ್ಸದ್ದಿ ತನದಿಂದ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸಿದ್ದಾರೆ ಎಂದು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ಗುಣಗಾನ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದ ಬಳಿ ಇರುವ ಎಸ್ಜಿಎಸ್ವೈ ಸಭಾಂಗಣದಲ್ಲಿ ನಡೆದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ೧೩೮ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದರ್ಶಿತ್ವ, ವಿವೇಕಶಾಲಿಯಾಗಿ ತಮ್ಮ ಆಡಳಿತವನ್ನು ನಡೆಸಿದ್ದಾರೆ. ವಿಜಯನಗರ ಪತನದ ನಂತರ ಮೈಸೂರು ಸಂಸ್ಥಾನದಲ್ಲಿ ಆಡಳಿತ ಮಾಡಿದ ಪ್ರಮುಖರಲ್ಲಿ ಚಿಕ್ಕವೀರ ರಾಜೇಂದ್ರ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಪ್ರಮುಖವಾಗಿದೆ.
ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಸಾಮಾಜಿಕ ಕ್ಷೇತ್ರ ಸುಧಾರಣೆ ಮತ್ತು ಕೈಗಾರಿಕಾ ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಆ ನಿಟ್ಟಿನಲ್ಲಿ ಏಷ್ಯದಲ್ಲಿ ಬೆಂಗಳೂರಿಗೆ ಸಿಂಷಾದಿAದ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಶಾಲಾ-ಕಾಲೇಜು, ವಿಶ್ವ ವಿದ್ಯಾನಿಲಯ, ಆಸ್ಪತ್ರೆ, ಕೈಗಾರಿಕೆಗಳು, ಕೃಷ್ಣರಾಜ ಸಾಗರ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳ ಜೊತೆಗೆ ಇಡೀ ಭರತಖಂಡದಲ್ಲಿಯೇ ಮೊಟ್ಟಮೊದಲು ಮೀಸಲಾತಿಯನ್ನು ಕಲ್ಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸುಬ್ರಾಯ ಸಂಪಾಜೆ ಅವರು ಬಣ್ಣಿಸಿದರು.
ಮೈಸೂರು ಸಂಸ್ಥಾನದ ಒಡೆಯರ್ ರಾಜವಂಶಸ್ಥರು ಸುಮಾರು ೧೩೯೯ ರಿಂದ ೧೯೫೦ ರವರೆಗೆ ಮೈಸೂರಿನ ಸಾಮ್ರಾಜ್ಯವನ್ನು ಆಳಿದ ಭಾರತೀಯ ರಾಜವಂಶಸ್ಥರಾಗಿದ್ದಾರೆ. ಭಾಷೆ, ಸಾಹಿತ್ಯ, ಸಾಂಸ್ಕೃತಿಕ ವಿಷಯದಲ್ಲಿ ಜಾಗೃತಿಯನ್ನು ಮೂಡಿಸಿದರು ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್. ಚೇತನ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನವನ್ನು ಎಲ್ಲೆಡೆ ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು.
ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಸೇರಿದಂತೆ ಹಲವಾರು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಜಪ್ರಭುತ್ವ ಆಡಳಿತವಿದ್ದರೂ ಸಹ ಪ್ರಜಾಪ್ರಭುತ್ವ ಮಾದರಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಭಿವೃದ್ಧಿಯತ್ತ ಕೆಲಸ ಮಾಡಿದ್ದು, ಇವರನ್ನು ಸದಾ ಸ್ಮರಿಸಬೇಕು ಎಂದು ಎಚ್.ಎಸ್. ಚೇತನ್ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಸ್ವಾತಂತ್ರö್ಯ ಮುಂಚೆ ಯುದ್ಧ ಮಾಡುವ ಮೂಲಕ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರು. ಆದರೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಶೈಕ್ಷಣಿಕ, ವೈದ್ಯಕೀಯ ಹಾಗೂ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಕೊಂಡಾಡಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ತಾಲೂಕು ಘಟಕದ ಅಧ್ಯಕ್ಷರುಗಳಾದ ಅಂಬೆಕಲ್ಲು ನವೀನ್ (ಮಡಿಕೇರಿ), ಕೆ.ಎಸ್. ಮೂರ್ತಿ (ಕುಶಾಲನಗರ), ವಿಜೇತ್ (ಸೋಮವಾರಪೇಟೆ), ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇತರರು ಇದ್ದರು.
ಕಡ್ಲೇರ ತುಳಸಿ ಮೋಹನ್, ರೇವತಿ ರಮೇಶ್ ಮತ್ತು ರಮ್ಯ ಅವರು ನಾಡಗೀತೆ ಹಾಡಿದರು, ರೇವತಿ ರಮೇಶ್ ಸ್ವಾಗತಿಸಿದರು, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ನಿರೂಪಿಸಿದರು, ಅಂಬೆಕಲ್ಲು ನವೀನ್ ವಂದಿಸಿದರು.