ಗೋಣಿಕೊಪ್ಪಲು, ಜೂ. ೭: ಕೊಡಗು ಜಿಲ್ಲೆಗೆ ಹೆಸರುವಾಸಿಯಾದ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಬಸ್ ನಿಲ್ದಾಣ ಗುಂಡಿ ಬಿದ್ದು ವರ್ಷಗಳೇ ಕಳೆದಿವೆ. ಗುಂಡಿಬಿದ್ದ ಸ್ಥಳದಲ್ಲಿ ಮಳೆ ನೀರು ನಿಂತಿರುವುದರಿAದ ವಾಹನಗಳು ಚಲಿಸುವ ವೇಳೆ ಇದರ ನೀರು ಪ್ರಯಾಣಿಕರಿಗೆ ತಾಗಿ ಸಮಸ್ಯೆ ಎದುರಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ತಂಗಲು ವ್ಯವಸ್ಥೆ ಇಲ್ಲದ ಕಾರಣ ಅಂಗಡಿ ಮುಂದೆ ನಿಂತು ಬಸ್ಸಿಗೆ ಕಾಯುವ ಪರಿಸ್ಥಿತಿ ಹಲವು ವರ್ಷಗಳಿಂದ ಸಾಮಾನ್ಯವಾಗಿದೆ.

ದೂರದ ಊರಿಗೆ ಪ್ರಯಾಣಿಸುವ ದಿನನಿತ್ಯದ ಪ್ರಯಾಣಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ತೆರಳಲು ಬಸ್ ನಿಲ್ದಾಣದಲ್ಲಿರುವ ಹೂವಿನ ಅಂಗಡಿಯ ಬಳಿ ಇರುವ ಜಾಗದಲ್ಲಿಯೇ ನಿಲ್ಲುವ ಪ್ರಮೇಯ ಬಂದೊದಗಿದೆ. ಬಸ್‌ಗೆ ಹತ್ತುವ ವೇಳೆ ಪ್ರಯಾಣಿಕರು ಈ ಗುಂಡಿ ಬಿದ್ದ ಜಾಗದಲ್ಲಿ ಇರುವ ಕೊಳಚೆ ನೀರನ್ನು ದಾಟಿ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಅನೇಕ ಸಮಯದಿಂದ ಮುಂದುವರೆಯುತ್ತಿದೆ.

ನಿಲ್ದಾಣದಲ್ಲಿರುವ ಹೂವಿನ ಅಂಗಡಿ ಮಾಲೀಕರು ತಮ್ಮ ವ್ಯಾಪಾರವನ್ನು ಅಂಗಡಿಯ ಒಳಬದಿಯಲ್ಲಿ ನಡೆಸದೆ ಹೊರ ಭಾಗದಲ್ಲಿ ಮಾಡುತ್ತಿದ್ದಾರೆ. ಇದರಿಂದ ಜನರ ಓಡಾಟಕ್ಕೆ ಹಾಗೂ ಬಸ್ ನಿಲುಗಡೆಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಈ ನಿಲ್ದಾಣದಲ್ಲಿ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳು ನೂರಾರು ಸಂಖ್ಯೆಯಲ್ಲಿ ಮುಂಜಾನೆಯಿAದ ಸಂಜೆಯವರೆಗೆ ನಿಂತಿರುತ್ತದೆ. ಈ ಗುಂಡಿಬಿದ್ದ ಜಾಗದಿಂದಲೇ ವಾಹನಗಳು ಸಂಚರಿಸಬೇಕಾಗಿದೆ.

ದಿಢೀರನೆ ಸುರಿಯುವ ಮಳೆಯಿಂದ ಈ ಗುಂಡಿಗೆ ನೀರು ತುಂಬಿಕೊAಡು ನಾಗರಿಕರ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ನಗರದ ಮುಖ್ಯ ಪಟ್ಟಣದಲ್ಲಿ ಇಷ್ಟು ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದರೂ ಈ ಬಗ್ಗೆ ಗಮನಹರಿಸಬೇಕಾದ ಪಂಚಾಯಿತಿ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಸದಾ ಜನಜಂಗುಳಿಯಿAದ ಕೂಡಿರುವ ಈ ಪ್ರದೇಶದಲ್ಲಿ ಜನರ ಓಡಾಟಕ್ಕೆ ಸಮಸ್ಯೆ ಎದುರಾಗಿದೆ.

ನಿಲ್ದಾಣದಲ್ಲಿ ಖಾಸಗಿ ವಾಹನಗಳು ಹಾಗೂ ಆಟೋ ರಿಕ್ಷಾಗಳಿಗೆ ನಿಷೇಧವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಲ್ದಾಣದಲ್ಲಿ ಆಟೋ ರಿಕ್ಷಾಗಳು, ಖಾಸಗಿ ವಾಹನಗಳು ನಿಲುಗಡೆಗೊಂಡಿರುತ್ತವೆ. ಇದರಿಂದ ಬಸ್ ಸಂಚಾರಕ್ಕೆ ತೊಂದರೆ ಎದುರಾಗಿದೆ. ಸಂಜೆಯ ವೇಳೆ ಬಸ್‌ಗಳು ಕಡಿಮೆ ಇರುವ ಸಂದರ್ಭ ನಿಲ್ದಾಣದಲ್ಲಿ ಹಲವು ಖಾಸಗಿ ವಾಹನಗಳು ಹಾಗೂ ಆಟೋ ರಿಕ್ಷಾಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ತೆರಳುತ್ತಾರೆ. ಈ ವೇಳೆ ನಾಗರಿಕರ ಸಂಚಾರಕ್ಕೂ ಹಾಗೂ ಬಸ್ಸಿನ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕಾದ ಪೊಲೀಸರು ಸಂಜೆಯ ವೇಳೆಯಲ್ಲಿ ನಿಲ್ದಾಣದ ಆಸುಪಾಸಿನಲ್ಲಿ ಯಾರೂ ಕೂಡ ಕರ್ತವ್ಯ ನಿರ್ವಹಿಸದೇ ಇರುವುದರಿಂದ ಇದನ್ನು ಕೇಳುವವರು ಇಲ್ಲದಂತಾಗಿದೆ.

(ಮೊದಲ ಪುಟದಿಂದ)

ಬಹುತೇಕ ಆಟೋರಿಕ್ಷಾಗಳು ಹಾಗೂ ಸರ್ಕಾರಿ ಬಸ್ ಆಗಮಿಸುವ ವೇಳೆ ಇದರ ಹಿಂಬದಿಯಲ್ಲಿ ಬಂದು ಸಾಲು ಸಾಲಾಗಿ ನಿಲ್ಲುತ್ತವೆ. ಇದರಿಂದ ನಿಲ್ದಾಣದ ವ್ಯಾಪ್ತಿಯಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.

ನಗರದ ಕಾರು ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಹಳ್ಳ ನಿರ್ಮಾಣವಾಗಿದ್ದು ಮಳೆ ಬಂದ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ಈ ಭಾಗದಿಂದ ಸಂಚರಿಸುವ ವಾಹನಗಳಿಗೆ ಸಮಸ್ಯೆ ಎದುರಾಗಿದೆ. ಸಂಗ್ರಹವಾಗುವ ನೀರು ಹರಿಯಲು ಜಾಗವಿಲ್ಲದೆ ನಿಂತಲ್ಲೇ ನಿಂತಿರುವುದರಿAದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಏಕಮುಖ ಸಂಚಾರದ ಮಾರ್ಗ ಈ ಭಾಗದಿಂದಲೇ ತೆರಳಬೇಕಾಗಿರುವುದರಿಂದ ಇಲ್ಲಿ ಹಳ್ಳ ಬಿದ್ದಿರುವ ಜಾಗವನ್ನು ಸರಿಪಡಿಸಬೇಕಾಗಿದೆ.

ರಸ್ತೆ ಬದಿಗಳಲ್ಲಿ ತಳ್ಳುಗಾಡಿ ಹಾಗೂ ಇತರ ವಾಹನಗಳಲ್ಲಿ ಹಣ್ಣು ಹಂಪಲು, ತರಕಾರಿ ಮಾರುತ್ತಿದ್ದವರಿಗೆ ಈ ಹಿಂದೆ ಪೊಲೀಸರು ಕಡಿವಾಣ ಹಾಕಿದ್ದರು. ಇದೀಗ ಬೈಪಾಸ್ ರಸ್ತೆಗೆ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಇಂತಹ ವಾಹನಗಳು ಸಾಲುಸಾಲಾಗಿ ನಿಂತು ವ್ಯಾಪಾರ ನಡೆಸುತ್ತಿವೆ. ಸಂಜೆಯ ವೇಳೆಯಲ್ಲಿ ಕೊಳೆತ ಪದಾರ್ಥಗಳನ್ನು ಚರಂಡಿಯಲ್ಲಿಯೇ ಬಿಸಾಡಿ ಜನರು ತೆರಳುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ದುರ್ನಾತ ಬೀರುತ್ತಿದೆ. ಪ್ರತಿನಿತ್ಯ ಗ್ರಾಮ ಪಂಚಾಯಿತಿಯ ಕಸದ ವಾಹನಗಳು ಅಂಗಡಿ ಮುಂಭಾಗ ತೆರಳುತ್ತಿದ್ದರೂ ಇತ್ತೀಚೆಗೆ ಕೆಲವು ಅಂಗಡಿ ಮಾಲೀಕರು ರಸ್ತೆ ಬದಿಯಲ್ಲಿಯೇ ಮೂಟೆ ಮೂಟೆ ಕಸವನ್ನು ಸುರಿದು ತೆರಳುತ್ತಿದ್ದಾರೆ. ಈ ಕಸದ ರಾಶಿಗಳನ್ನು ಬೀದಿ ನಾಯಿಗಳು ಎಳೆದು ಹರಡುತ್ತಿವೆ. ಇದರಿಂದ ಚೀಲದಲ್ಲಿದ್ದ ತ್ಯಾಜ್ಯ ವಸ್ತುಗಳು ರಸ್ತೆ ಬದಿಯಲ್ಲಿ ಬೀಳಲಾರಂಭಿಸಿವೆ. ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದನ್ನು ತುಳಿದುಕೊಂಡೇ ತೆರಳುವ ಪ್ರಸಂಗ ಕಂಡುಬAದಿದೆ.