ಸಿದ್ದಾಪುರ, ಜೂ. ೭: ಕರಡಿಗೋಡು ಗ್ರಾಮದಲ್ಲಿ ಒಂಟಿಸಲಗವೊAದು ದಿನನಿತ್ಯ ಕಾಫಿ ತೋಟದೊಳಗೆ ಸುತ್ತಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕರಡಿಗೋಡು ಗ್ರಾಮದ ಖಾಸಗಿ ರೆಸಾರ್ಟ್ ಬಳಿ ಹಾಗೂ ಟೀಕ್‌ವುಡ್ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಬೃಹತ್ ಗಾತ್ರದ ಒಂಟಿ ಸಲಗವು ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಈ ಹಿಂದೆ ಮಾನವರ ಮೇಲೆ ಕೂಡ ದಾಳಿ ನಡೆಸಿತ್ತು. ಕರಡಿಗೋಡು ಗ್ರಾಮದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಇದ್ದು, ಇಂಜಿಲಗೆರೆ ಪುಲಿಯೇರಿ ಗ್ರಾಮಗಳಲ್ಲಿ ಕೂಡ ಕಾಡಾನೆಗಳು ಬೀಡುಬಿಟ್ಟು ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದು ಒಂಟಿಸಲಗವನ್ನು ಅರಣ್ಯ ಇಲಾಖಾಧಿಕಾರಿಗಳು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ಇದಲ್ಲದೇ ಗುಹ್ಯ ಗ್ರಾಮದಲ್ಲಿ ಕಾಡಾನೆಗಳು ಮರಿಯಾನೆಗಳೊಂದಿಗೆ ಸುತ್ತಾಡುತ್ತಿದ್ದು, ಶಾಲೆಗಳಿಗೆ ತೆರಳುವ ಮಕ್ಕಳಿಗೆ ಹಾಗೂ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಭಯದ ವಾತಾವರಣ ಮೂಡಿದೆ. ಈ ಭಾಗದಲ್ಲಿ ಬೀಡುಬಿಟ್ಟು ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಬೆಳೆಗಾರರು ಕಾರ್ಮಿಕರು ಒತ್ತಾಯಿಸಿದ್ದಾರೆ.