ಪೊನ್ನಂಪೇಟೆ, ಜೂ. ೭: ಮುಸ್ಲಿಮರ ಪರಮೋಚ್ಚ ಪವಿತ್ರವಾಗಿರುವ ಹಜ್ ಯಾತ್ರೆ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಹೇಳಿದರು.

ವೀರಾಜಪೇಟೆಯ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಎನ್.ಸಿ.ಟಿ. ವತಿಯಿಂದ ನಡೆದ ಹಜ್ ಯಾತ್ರಾರ್ಥಿಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರು ಹಜ್ ಆಚರಣೆಯನ್ನು ನಿಜವಾದ ಶ್ರದ್ಧೆಯಿಂದ ಮತ್ತು ಶುದ್ಧವಾಗಿ ನಿರ್ವಹಿಸುತ್ತಾರೋ ಅವರು ಮನೆಗೆ ಹಿಂದಿರುಗಿದಾಗ ತಮ್ಮ ಜೀವನದ ಪಾಪಗಳನ್ನು ತೊಳೆದುಕೊಳ್ಳುತ್ತಾರೆ ಎಂಬುದು ಬಲವಾದ ನಂಬಿಕೆಯಾಗಿದೆ ಎಂದರು.

ಹಜ್ ಯಾತ್ರೆ ಮನುಷ್ಯನಲ್ಲಿ ದಯೆ ಮತ್ತು ಸಕಾರಾತ್ಮಕತೆಯನ್ನು ಪ್ರಚೋದಿಸುತ್ತದೆ. ಅಲ್ಲದೆ ಈ ಪವಿತ್ರ ಸತ್ಕರ್ಮ ವ್ಯಕ್ತಿಯ ಆತ್ಮಗೌರವದ ಅತ್ಯುನ್ನತ ರೂಪವೂ ಆಗಿದೆ. ಪ್ರವಾದಿ ಮುಹಮ್ಮದ್ ಅವರು ಅನುಸರಿಸಿದ ಸರ್ವಶಕ್ತನ ತ್ಯಾಗ ಮತ್ತು ವಿಧೇಯತೆಯ ಅಸ್ಮಿತೆಯನ್ನು ಹೊಂದಿರುವ ಹಜ್ ಯಾತ್ರೆ ವಿಶ್ವಾಸಿಗಳ ಆಧ್ಯಾತ್ಮಿಕ ಬದುಕಿನ ಸ್ವಯಂ ನವೀಕರಣ ಮಹತ್ವದ ಘಟ್ಟ ಎಂದು ವಿವರಿಸಿದರು

ಕಾರ್ಯಾಗಾರದಲ್ಲಿ ವಿಶೇಷ ತರಬೇತುದಾರರಾಗಿ ಪಾಲ್ಗೊಂಡಿದ್ದ ಕೇರಳದ ಕಲ್ಲಿಕೋಟೆಯ ವಿದ್ವಾಂಸ ಸುಲೈಮಾನ್ ಸಹದಿ ಅವರು ಪವಿತ್ರ ಹಜ್ ಯಾತ್ರೆಯ ಆರಂಭದಿAದ ಅಂತ್ಯದವರೆಗಿನ ಕುರಿತ ಧಾರ್ಮಿಕ ವಿಧಿ ವಿಧಾನಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಅಲ್ಲದೆ ಎನ್.ಸಿ.ಟಿ. ಮೂಲಕ ಈ ಬಾರಿ ತೆರಳುತ್ತಿರುವ ಹಜ್ ಯಾತ್ರಾರ್ಥಿಗಳಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಲಿ ಮುಸ್ಲಿಯಾರ್ ಗುಂಡಿಕೆರೆ, ಎನ್.ಸಿ.ಟಿ. ಸಂಸ್ಥೆಯ ವ್ಯವಸ್ಥಾಪಕ ಕೆ.ಎ. ಹನೀಫ್, ಪದಾಧಿಕಾರಿಗಳಾದ ಅಕ್ಕಳತಂಡ ಝಿಯಾ ಶಫೀಕ್, ಫಿರೋಜ್, ಮಸೂದ್, ಅಬ್ದುಲ್ ಬಾಸಿತ್ ಮೊದಲಾದವರು ಪಾಲ್ಗೊಂಡಿದ್ದರು.