ಮಡಿಕೇರಿ, ಜೂ. ೬: ಬೈಕ್ ಹಾಗೂ ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿದರೆ, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಡಿಕೇರಿ-ಮೈಸೂರು ಹೆದ್ದಾರಿಯ ಸಿಂಕೋನ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಾಡಂಚರ ಎಂಬಲ್ಲಿನ ನಿವಾಸಿಗಳಾದ ಶಾಹಿದ್ ಆಲಿ ಅವರ ಪುತ್ರ ಮಹಮ್ಮದ್ ಸಾನಿಲ್(೨೪) ಹಾಗೂ ರಫೀಕ್ ಎಂಬವರ ಪುತ್ರ ಮಹಮ್ಮದ್ ರಾಪ್ಸದ್(೨೪) ಎಂಬವರುಗಳು ಬೆಂಗಳೂರಿನಿAದ ಮಡಿಕೇರಿಗಾಗಿ ಕಣ್ಣೂರಿಗೆ ತೆರಳಲು ಬೈಕಿನಲ್ಲಿ(ಕೆ.ಎಲ್.೧೩ ಎಯು೧೫೩೮) ಬರುತ್ತಿದ್ದರು. ೮.೧೫ರ ವೇಳೆಗೆ ಸಿಂಕೋನ ಬಳಿ ಬರುತ್ತಿದ್ದಂತೆ ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಪ್ರವಾಸಿಗರ ಇನ್ನೋವ ಕಾರಿಗೆ (ಕೆಎ ೦೩ಎಸಿ ೮೬೪೬) ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಸವಾರ ಸಾನಿಲ್‌ನ ತಲೆ ಕಾರಿಗೆ ಬಡಿದು ಮತ್ತೆ ರಸ್ತೆಗೆ ಅಪ್ಪಳಿಸಿದ್ದರಿಂದ ತಲೆ ಛಿದ್ರಗೊಂಡು ಮೆದುಳು ಹೊರಬಂದು ಅತೀವ

(ಮೊದಲ ಪುಟದಿಂದ)ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹೆಲ್ಮೆಟ್ ಧರಿಸದ್ದರಿಂದ ತಲೆ ಛಿದ್ರಗೊಳ್ಳುವಂತಾಗಿದೆ. ಹಿಂಬದಿ ಕುಳಿತಿದ್ದ ರಾಪ್ಸದ್ ನ ಬಲಗಾಲು ತುಂಡರಿಸಿದ್ದು, ತಲೆ, ಎದೆ, ಕೈಗಳಿಗೂ ಗಾಯಗಳಾಗಿವೆ. ಕಣ್ಣೂರಿನಲ್ಲಿ ವಾಸವಿರುವ ಈರ್ವರು ಗೆಳೆಯರು ಬೆಂಗಳೂರಿಗೆ ಪ್ರವಾಸ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರಿನ ಬಲಭಾಗ ನಜ್ಜು ಗುಜ್ಜಾಗಿದ್ದರೆ, ಬೈಕ್ ಪುಡಿಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಕಾರಿನ ಚಾಲಕ ಹಾಸನದ ಹರೀಶ್ ಎಂಬಾತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.