*ಗೋಣಿಕೊಪ್ಪ, ಜೂ. ೬: ಹುಚ್ಚು ನಾಯಿ ಕಡಿಯುವುದರಿಂದ ರೇಬೀಸ್ ರೋಗ ಹರಡುತ್ತದೆ. ಈ ಹಿನ್ನೆಲೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪೊನ್ನಂಪೇಟೆ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ. ಎಸ್. ಶಾಂತೇಶ್ ಹೇಳಿದರು.
ಪೊನ್ನಂಪೇಟೆ ತಾಲೂಕು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗೋಣಿಕೊಪ್ಪ ಪಶು ಆಸ್ಪತ್ರೆ, ಮಡಿಕೇರಿ ಪ್ರಾಣಿ ದಯಾ ಸಂಘ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪಾಲಿಬೆಟ್ಟ ಕೆನೆಲ್ ಕ್ಲಬ್ ಸಹಯೋಗದಲ್ಲಿ ಮಾಯಮುಡಿ ಗ್ರಾಮದ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಆವರಣದಲ್ಲಿ ರೇಬೀಸ್ ಜಾಗೃತಿ ಶಿಬಿರ, ಉಚಿತ ಲಸಿಕೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗ ಪೀಡಿತ ಬೆಕ್ಕು, ಕಾಡು ಪ್ರಾಣಿಗಳಾದ ಮುಂಗುಸಿ, ನರಿ, ತೋಳಗಳಿಂದ ಕಚ್ಚಿಸಿಕೊಂಡ ಮನುಷ್ಯರಿಗೆ, ಜಾನುವಾರುಗಳಿಗೆ ರೇಬೀಸ್ ಹರಡಿರುವ ನಿದರ್ಶನಗಳಿವೆ. ಆದರೆ, ಬಹುತೇಕ ಪ್ರಮಾಣದ ರೇಬೀಸ್ ಹರಡುವುದು ನಾಯಿ ಕಚ್ಚುವುದರಿಂದ ಎಂಬುವುದು ಸಾಬೀತಾಗಿದೆ. ಆದ್ದರಿಂದ ಶ್ವಾನ ಪ್ರಿಯರು ನಾಯಿಗಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸುವುದು, ನಾಯಿಗಳಲ್ಲಿ ರೇಬೀಸ್ ರೋಗದ ಲಕ್ಷಣ ಕಂಡು ಬಂದಾಗ ಮುಂಜಾಗ್ರತೆ ವಹಿಸಬೇಕಿದೆ. ಚುಚ್ಚುಮದ್ದು ನೀಡುವುದರಿಂದ ಶೇ. ೧೦೦ ರಷ್ಟು ರೋಗ ನಿಯಂತ್ರಿಸಲು ಸಾಧ್ಯವಿದೆ ಎಂದರು.
ರೋಗ ಇರುವ ಪ್ರಾಣಿಗಳು ಕಚ್ಚಿದಾಗ, ಗಾಯದ ಮೇಲೆ ನಕ್ಕಿದಾಗ ವೈರಾಣು ದೇಹದಲ್ಲಿ ಸೇರಿ ಹರಡುತ್ತದೆ. ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ೩ ವಾರಗಳಿಂದ ೩ ತಿಂಗಳು, ಕೆಲವೊಂದು ವರ್ಷಗಳೂ ಕೂಡ ಆಗಬಹುದು. ನಂತರ ಜೀವ ಉಳಿಸಿಕೊಳ್ಳುವುದು ಅಸಾಧ್ಯ. ಇದರಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಯಿತು. ಸುಮಾರು ೩೦ ಕ್ಕೂ ಹೆಚ್ಚು ನಾಯಿಗಳಿಗೆ ಕಾರ್ಯಕ್ರಮದಲ್ಲಿ ಲಸಿಕೆ ನೀಡಲಾಯಿತು.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌ. ಅಧ್ಯಕ್ಷ ಎಸ್. ಬಿ. ರಮೇಶ್, ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಕಾರ್ಯದರ್ಶಿ ಬಲ್ಯಂಡ ರವಿ, ಸದಸ್ಯರಾದ ಆಪಟ್ಟೀರ ಎ. ಬೋಪಣ್ಣ, ಆಪಟ್ಟಿರ ಪ್ರದೀಪ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಕೊಡಗು ಕೆನೆಲ್ ಕ್ಲಬ್ ಅಧ್ಯಕ್ಷ ಕುಪ್ಪಂಡ ದೀಪಕ್ ಅಪ್ಪಯ್ಯ ಇದ್ದರು.