ಪೊನ್ನಂಪೇಟೆ, ಜೂ. ೫: ಪಟ್ಟಣದ ಮಹಿಳಾ ಸಮಾಜದ ಮುಂಭಾಗ ತಾ. ೫ ರಂದು ಮಧ್ಯಾಹ್ನ ಟಿಪ್ಪರ್ (ಕೆ.ಎ. ೧೨ ಬಿ. ೪೫೩೬) ಹಾಗೂ ಸ್ಕೂಟರ್ (ಕೆ.ಎ. ೫೫, ಎಲ್. ೩೯೪೯) ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮನೋಜ್ (೩೭) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಗೋಣಿಕೊಪ್ಪಲು ಸಮೀಪದ ಕೈಕೇರಿಯಲ್ಲಿ ಬಾಡಿಗೆಗೆ ವಾಸವಾಗಿದ್ದ ಮೂಲತಃ ವೀರಾಜಪೇಟೆಯ ಪೆರುಂಬಾಡಿ ಗ್ರಾಮದ ಮನೋಜ್ ಇಂದು ಪೊನ್ನಂಪೇಟೆಯ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದ ಸಂಬAಧಿಕರ ಮದುವೆಗೆ, ಸ್ಕೂಟರ್‌ನಲ್ಲಿ ಬಂದು ಮದುವೆ ಮುಗಿಸಿಕೊಂಡು ಮನೆಗೆ ಹೊರಡುವ ಸಲುವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಹಿಂಬದಿಗೆ ತೆಗೆಯುತ್ತಿದ್ದ ಸಂದರ್ಭ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪ ಕಡೆಗೆ ಚಲಿಸುತ್ತಿದ್ದ ಬೆಳ್ಳೂರು ಗ್ರಾಮದ ಸತೀಶ್ ಎಂಬವರಿಗೆ ಸೇರಿದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾದ ಗಾಯಗೊಂಡ ಮನೋಜ್ ಅನ್ನು ಗೋಣಿಕೊಪ್ಪಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ೬ ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾರೆ.

ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.