ಸೋಮವಾರಪೇಟೆ, ಜೂ. ೪: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಬದುಕಿಗೆ ಆಂಗ್ಲಮಾಧ್ಯಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಾಂತಳ್ಳಿಯAತಹ ಗ್ರಾಮೀಣ ಭಾಗದಲ್ಲಿ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ಆಂಗ್ಲಮಾಧ್ಯಮ ಶಾಲೆ ತೆರೆದು ವಿದ್ಯಾದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅಭಿಪ್ರಾಯಿಸಿದರು.

ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿಯಲ್ಲಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ದಾನಿಗಳ ನೆರವಿನೊಂದಿಗೆ ರೂ.೩೦ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾಸಂಸ್ಥೆಯ ಕಟ್ಟಡವನ್ನು ಉದ್ಘಾಟಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಶಾಂತಳ್ಳಿಯAತಹ ಗುಡ್ಡಗಾಡು ಹಾಗೂ ಕುಗ್ರಾಮಗಳನ್ನೇ ಒಳಗೊಂಡಿರುವ ಪ್ರದೇಶದಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಈ ಭಾಗದ ಬಡ ಕೃಷಿಕರು, ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಸೇವೆ ಮಹತ್ತರವಾದುದು ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರೂ ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಶಿಲ್ಪಿಗಳಂತೆ ಕೆಲಸ ಮಾಡಬೇಕು. ಶಾಲೆಗಳು ಉಳಿಯಲು ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಪಾತ್ರ ಮುಖ್ಯ. ಸಂಸ್ಥೆಯ ಪದಾಧಿಕಾರಿಗಳು ಅಸೂಯೆ ಬದಿಗೊತ್ತಿ, ಅಧಿಕಾರ ಲಾಲಸೆಯಿಂದ ದೂರ ಉಳಿದು ವಿದ್ಯಾಸಂಸ್ಥೆಯನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಾನಿಗಳಾದ ಅರುಣ್ ಕೊತ್ನಳ್ಳಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಯ ಚಿಂತನೆ ಇದ್ದು, ಗ್ರಾಮೀಣ ಪ್ರದೇಶದ ರೈತರ ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿಯಬೇಕೆಂಬ ಮಹಾದಾಸೆಯಿಂದ ದಾನಿಗಳು ಸೇರಿಕೊಂಡು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಗಿದೆ. ಕೃಷಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿಯಾಗಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಕೆ. ಗೋಪಾಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕಾರ್ಯಪ್ಪ, ನಿರ್ದೇಶಕರುಗಳಾದ ವೆಂಕಟೇಶ್, ಸಂಪತ್, ಜಯೇಂದ್ರ, ಉತ್ತಯ್ಯ, ರವಿ, ವೀರಪ್ಪ, ಸುಬ್ಬಯ್ಯ, ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಗುಂಡೇಗೌಡ, ರತ್ನಾವತಿ, ಮುಖ್ಯಶಿಕ್ಷಕಿ ಉಷಾಕುಮಾರಿ, ಹಳೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶ್ರೀಕುಮಾರಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ, ಶಿಕ್ಷಕಿ ತುಳಸಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.