ಸಿದ್ದಾಪುರ, ಜೂ ೪: ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈ ಹಿನ್ನೆಲೆಯಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಯೊAದನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾ ಅಧಿಕಾರಿಗಳು ಶನಿವಾರದಂದು ಕಾರ್ಯಾಚರಣೆ ನಡೆಸಿದರು.

ಸಿದ್ದಾಪುರ ವ್ಯಾಪ್ತಿಯ ಗುಹ್ಯ, ಕರಡಿಗೋಡು, ಬೀಟಿಕಾಡು ಭಾಗದಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಪಡಿಸುತ್ತಿವೆ. ಅಲ್ಲದೇ ಮಾನವನ ಮೇಲೆ ಕೂಡ ದಾಳಿ ನಡೆಸಿ ಹತ್ಯೆ ಮಾಡಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿರವರು ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿಯಲು ಪ್ರಸ್ತಾವನೆ ಕಳುಹಿಸಿದ್ದು, ಜಿಲ್ಲೆಯಲ್ಲಿ ೫ ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ದೊರೆತಿತ್ತು. ಈಗಾಗಲೇ ಚೆಯ್ಯಂಡಾಣೆ ಗ್ರಾಮದಲ್ಲಿ ೨ ಕಾಡಾನೆಗಳನ್ನು ಸೆರೆ ಹಿಡಿಯಲಾ ಯಿತು. ಈ ಪೈಕಿ ಒಂದು ಕಾಡಾನೆಯು ಕಾರ್ಯಾಚರಣೆ ಸಂದರ್ಭ ಕುಸಿದು ಸಾವನ್ನಪ್ಪಿತ್ತು. ಇದೀಗ ಸಿದ್ದಾಪುರದ ಬೀಟಿಕಾಡು ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಶನಿವಾರದಂದು ಬೆಳಗ್ಗಿನ ಜಾವದಿಂದ ಕಾರ್ಯಾಚರಣೆ ತಂಡವು ಸಾಕಾನೆಗಳಾದ ಅಭಿಮನ್ಯು, ಅರ್ಜುನ, ಧನಂಜಯ, ಪ್ರಶಾಂತ್, ಅಜೇಯ ಸಹಾಯದೊಂದಿಗೆ ಕಾಫಿ ತೋಟದಲ್ಲಿ ಸುತ್ತಾಡಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಲಗವನ್ನು ಗುರುತಿಸಿದರು. ಆದರೆ ಕಾಫಿ ತೋಟದ ಒಳಗೆ ಸಲಗವು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸು ತ್ತಿದ್ದು, ಇದರಿಂದ ಅರವಳಿಕೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಕೂಡ ಛಲ ಬಿಡದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಜೆಯಾದರೂ ಕಾರ್ಯಾಚರಣೆ ಯನ್ನು ಮುಂದುವರೆಸಿದರು. ನಂತರ ಕಾರ್ಯಾಚರಣೆ ಕೈಬಿಡಲಾಯಿತು. ಇಂದು ಕೂಡ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ಕೆಲವು ತಿಂಗಳ ಹಿಂದೆ ಬೀಟಿಕಾಡು ಕಾಫಿ ತೋಟದ ಕಾಫಿ ಕಣದಲ್ಲಿ ರಾತ್ರಿ ಕಾವಲುಗಾರನೊಬ್ಬ ಮಲಗಿದ್ದ ಸಂದರ್ಭದಲ್ಲಿ ಇಂದು ಸೆರೆ ಹಿಡಿಯಲು ಗುರುತಿಸಿದ್ದ ಸಲಗವು ಕಾರ್ಮಿಕನ ಮೇಲೆ ಧಾಳಿ ನಡೆಸಿ ರಾತ್ರಿ ಸಮಯದಲ್ಲಿ ಸಾಯಿಸಿತ್ತು. ಇದೇ ಪುಂಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಪ್ರಯತ್ನಿಸುತ್ತಿರುವುದಾಗಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ತಿಳಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿರವರು ಮಾತನಾಡಿ, ಜಿಲ್ಲೆಯಲ್ಲಿ ೫ ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ದೊರೆತಿದ್ದು, ಸಿದ್ದಾಪುರ ಭಾಗದಲ್ಲಿ ಒಂದು ಕಾಡಾನೆ ಸೆರೆ ಹಿಡಿದ ಬಳಿಕ ನಂತರ ಅಭ್ಯತ್‌ಮಂಗಲ ಗ್ರಾಮದಲ್ಲಿ ಕೂಡ ಬೀಡುಬಿಟ್ಟಿರುವ ಕಾಡಾನೆಗಳನ್ನು ಸೆರೆ ಹಿಡಿಯಲಾಗುವುದೆಂದು ಮಾಹಿತಿ ನೀಡಿದರು.

ಕಾರ್ಯಾಚರಣೆ ಸಂದರ್ಭ ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಚಕ್ರಪಾಣಿ, ಎ.ಸಿ.ಎಫ್. ಕೋಣೇರ ರೋಶಿನಿ, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕೆ.ಪಿ. ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ಅರಣ್ಯ ವೈದ್ಯಾಧಿಕಾರಿ ಡಾ. ಮುಜೀಬ್, ಶೂಟರ್ ಅಕ್ರಂ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಚಿತ್ರ, ವರದಿ: ಎ.ಎನ್ ವಾಸು