ಕುಶಾಲನಗರ, ಜೂ. ೪: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್. ನಜೀರ್ ಅಹ್ಮದ್ ವಿಷಾದ ವ್ಯಕ್ತಪಡಿಸಿದರು. ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡಾ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಕ್ರೀಡೆಗಳನ್ನು ಹಿಂದಿಕ್ಕಿ ಇದೀಗ ಕ್ರಿಕೆಟ್‌ನತ್ತ ಬಹುತೇಕ ಜನರು ಒಲವು ತೋರಿರುವುದು ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವುದಕ್ಕೆ ಇದಕ್ಕೆ ಕಾರಣವಾಗಿದೆ. ಯುವಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವುದು ಕ್ರೀಡೆ ಮೇಲಿನ ಆಸಕ್ತಿ ಕಡಿಮೆಯಾಗಲು ಒಂದು ಕಾರಣ ಎಂದು ಅಭಿಪ್ರಾಯಿಸಿದ ಅವರು, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಬೆಳಗಿನ ಮತ್ತು ಸಂಜೆ ವೇಳೆಯ ವಾಯುವಿಹಾರಕ್ಕೆ ಹೋಗುವ ಹವ್ಯಾಸ ಮಕ್ಕಳು ಬೆಳೆಸಿಕೊಳ್ಳಬೇಕು ಎಂದರು. ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತೆ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ವಿ ಜೀವನ ಸಾಧಿಸಲು ಸಾಧ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಆರ್. ಶರವಣ ಕುಮಾರ್, ಬಡ-ಮಧ್ಯಮ ಮತ್ತಿತರ ವರ್ಗಗಳಿಗೆ ಆರ್ಥಿಕ ಶಕ್ತಿಯಾಗಿ ಮುನ್ನಡೆಯುತ್ತಿರುವ ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶತಮಾನೋತ್ಸವವನ್ನು ಆಚರಿಸುತ್ತಿದೆ. ಹಿರಿಯರ ಸದುದ್ದೇಶ ದಿಂದ ಸ್ಥಾಪನೆಗೊಂಡ ಸಂಸ್ಥೆ ಕಾರ್ಯವ್ಯಾಪ್ತಿ ಗ್ರಾಮೀಣ ಪ್ರದೇಶ ಗಳಿಗೂ ವಿಸ್ತರಿಸಿದೆ. ಶತಮಾನೋತ್ಸವ ಸಮಾರಂಭದ ಅಂಗವಾಗಿ ಸದಸ್ಯರಿಗೆ ಕ್ರೀಡಾ ಚಟುವಟಿಕೆಗಳು ಹಾಗೂ ತಾ. ೨೩ ರಂದು ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಸಂಬAಧ ಈಗಾಗಲೇ ೪ ಕೋಟಿ ರೂಗಳ ಮೌಲ್ಯದ ಜಾಗ ಖರೀದಿ ಮಾಡಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಕೆ.ಆರ್. ರಾಣಿ ಕ್ರೀಡೋತ್ಸವಕ್ಕೆ ಶುಭಾಶಯ ಕೋರಿದರು.

ಸಂಘದ ಸದಸ್ಯರ ೬ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯಿತು.

ಸಂಘದ ಪುರುಷÀ ಸದಸ್ಯರಿಗೆ ಕಬಡ್ಡಿ ಪಂದ್ಯಾಟ, ಕ್ರಿಕೆಟ್ ಪಂದ್ಯಾಟ, ೨೫ ಕೆಜಿ ಅಕ್ಕಿ ಚೀಲವನ್ನು ಹೊತ್ತು ೫೦ ಮೀಟರ್ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕ್ರೀಡಾ ಸಂಚಾಲಕ ಆನಂದ್ ಕುಮಾರ್ ತಿಳಿಸಿದರು. ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ, ಮ್ಯೂಸಿಕಲ್ ಚೇರ್, ‘ಪಾಸಿಂಗ್ ದ ಬಾಲ್’, ಗುಂಪು ಮನೆ ಆಟ ಮತ್ತು ಸದಸ್ಯರ ಮಕ್ಕಳಿಗೆ ಕೂಡ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘದ ನಿರ್ದೇಶಕರುಗಳು, ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಲೋಕೇಶ್ ಮತ್ತಿತರರು ಇದ್ದರು.