ಸೋಮವಾರಪೇಟೆ, ಜೂ. ೪: ಸಮೀಪದ ಕುಸುಬೂರು ಗ್ರಾಮದ ಕೆಂಚಮ್ಮನ ಬಾಣೆಯ ಶ್ರೀ ಬಲಮುರಿ ಗಣಪತಿ ದೇವಾಲಯ ಮತ್ತು ಭಾರತ್ ಮಾತಾ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ೨೦ನೇ ವರ್ಷದ ವಾರ್ಷಿಕೋತ್ಸವ ಮತ್ತು ಸ್ವಾಗತ ಕಮಾನು ಉದ್ಘಾಟನೆ ಕಾರ್ಯಕ್ರಮ ತಾ. ೫ರಂದು (ಇಂದು) ನಡೆಯಲಿದೆ.

ಬೆಳಿಗ್ಗೆ ೮.೩೦ಕ್ಕೆ ಪಾಲಿಗದ್ದೆಯ ಸ್ಕಂಧ ಕಾಫಿ ತೋಟದ ಮಾಲೀಕರಾದ ನಂದಿನಿ ಎಸ್. ಪ್ರಸಾದ್ ಮತ್ತು ಕಾರೆಕೊಪ್ಪ ಲಿಟಲ್ ಜಂಗಲ್ ಕಾಫಿ ತೋಟದ ಕೆ.ಎಂ. ಬೋಪಣ್ಣ ಸ್ವಾಗತ ಕಮಾನು ಉದ್ಘಾಟಿಸಲಿದ್ದಾರೆ. ೧೦.೩೦ಕ್ಕೆ ಗಣಪತಿ ಹೋಮ, ೧೧.೩೦ಕ್ಕೆ ಗಣಪತಿ ಕಳಸ ಅಭಿಷೇಕ ನಡೆಯಲಿದೆ.

ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಬೇಳೂರು ಕಾಫಿ ತೋಟದ ಪ್ರತಾಪ್ ಈರಪ್ಪ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದೇವಾಲಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ಜೆ. ಸುನಿಲ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ್, ಕೆ.ಪಿ. ಸುದರ್ಶನ್, ಭಾಗೀರಥಿ ಭಾಗವಹಿಸಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ. ಸೋಮಶೇಖರ್ ತಿಳಿಸಿದ್ದಾರೆ.