ಕಣಿವೆ, ಜೂ. ೨ : ಕುಶಾಲನಗರದ ಆರ್ಯವೈಶ್ಯ ಮಂಡಳಿಯ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಬೈಚನಹಳ್ಳಿಯ ಮಾರಮ್ಮ ದೇವಾಲಯದಿಂದ ಸಮಾಜದ ಮಹಿಳೆಯರಿಂದ ೧೨೮ ಕಲಶಗಳ ಮೆರವಣಿಗೆ ನಡೆಯಿತು. ಕಲಶ ಹೊತ್ತ ಮಹಿಳೆಯರು ಬೈಚನಹಳ್ಳಿಯ ಮಾರಮ್ಮ ದೇವಾಲಯದಿಂದ ಮುಖ್ಯ ರಸ್ತೆಯ ಮೂಲಕ ರಥ ಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ಅಮ್ಮನವರ ಸನ್ನಿಧಿಗೆ ಬಂದರು. ಇದಕ್ಕೂ ಮುನ್ನ ಬೆಳಿಗ್ಗೆ ಸೊಸೆಯಂದಿರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಉಪಾಧ್ಯಕ್ಷ ಬಿ.ಎಲ್.ಸತೀಶ್, ಕಾರ್ಯದರ್ಶಿ ಬಿ.ಎಲ್.ಅಶೋಕ್ ಕುಮಾರ್, ಕೋಶಾಧಿಕಾರಿ ಬಿ.ಆರ್. ನಟರಾಜು ಮೊದಲಾದವರಿದ್ದರು. ಕುಶಾಲನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಮಹಿಳೆಯರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಭಜನೆ ನೆರವೇರಿತು.
ಇಂದಿನ ಕಾರ್ಯಕ್ರಮ
ತಾ.೩ರಂದು (ಇಂದು) ಬೆಳಗ್ಗಿನಿಂದ ಚಂಡಿಕಾಹೋಮ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ವಾಸವಿ ಪೀಠಾಧಿಪತಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಆಶೀರ್ವಚನ, ನಂತರ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಭಾವಚಿತ್ರ ಹಾಗೂ ಸ್ವಾಮೀಜಿ ಅವರ ಭಾವಚಿತ್ರ ಅನಾವರಣ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ ೬ ಗಂಟೆಗೆ ವಾಸವಿ ಮಹಲ್ ಸಭಾಂಗಣದಲ್ಲಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಳೆದ ೭೫ ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿದ ಮಂಡಳಿಯ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.