ಮಡಿಕೇರಿ, ಜೂ. ೩: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದಕ್ಕೆ ಸಂಬAಧಿಸಿದ ರಿಹಾಬ್ ಇಂಡಿಯಾ ಫೌಂಡೇಷನ್ಗೆ ಸೇರಿದ ೩೩ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿರುವುದನ್ನು ವಿರೋಧಿಸಿ ಪಿ.ಎಫ್. ಐ. ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಪಾರದರ್ಶಕವಾಗಿ ಖಾತೆ ನಿರ್ವಹಣೆ ಮಾಡಿದರು. ರಾಜಕೀಯ ಉದ್ದೇಶದಿಂದ ಬಿಜೆಪಿ ಸರಕಾರ ಇಡಿಯನ್ನು ಬಳಸಿಕೊಂಡು ಪಿಎಫ್ಐ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ ಎಂದು ಆರೋಪಿಸಿ ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಿ.ಎಫ್.ಐ. ಜಿಲ್ಲಾಧ್ಯಕ್ಷ ಶೌಕತ್ ಅಲಿ ಮಾತನಾಡಿ, ಸಂವಿಧಾನದಡಿ ಕೆಲಸ ಮಾಡುತ್ತಿರುವ ಪಿಎಫ್ಐ ಹೋರಾಟವನ್ನು ಹತಿಕ್ಕುವ ಕೆಲಸ ಆಗುತ್ತಿದೆ. ಆರ್.ಎಸ್.ಎಸ್. ವಿರುದ್ಧ ಮಾತನಾಡುವುದಕ್ಕೆ ಸಂಘಟನೆ ವಿರುದ್ಧ ಇಡಿಯನ್ನು ಕೇಂದ್ರ ಸರಕಾರ ಬಳಸಿಕೊಂಡಿದೆ. ಕಾನೂನಾತ್ಮಕ ಹೋರಾಟ ಮಾಡುವುದನ್ನು ಸಹಿಸದೆ ಇಡಿ ಮೂಲಕ ಸಂಘಟನೆಯ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿರುವುದು ಖಂಡನೀಯ. ಇದರ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯ ಸಮಿತಿ ಸದಸ್ಯ ಹಾಗೂ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಮಾತನಾಡಿ, ಸರಕಾರ ಸಾಮಾಜಿಕ ಹೋರಾಟಗಾರರು, ಸಂಸ್ಥೆಗಳ ಮೇಲೆ ಬಿಜೆಪಿ ಸರಕಾರ ದಬ್ಬಾಳಿಕ ನಡೆಸುತ್ತಿದೆ. ೬೪ ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿ ಖಾತೆಗಳನ್ನು ಮುಟ್ಟುಗೋಲು ಹಾಕಿರುವುದು ಸರಿಯಲ್ಲ. ಆದಾಯ ತೆರಿಗೆ ಪಾವತಿಸಿ ಪಾರದರ್ಶಕವಾಗಿ ಖಾತೆ ನಿರ್ವಹಣೆ ಮಾಡಲಾಗಿದೆ. ಈ ಹಿಂದೆಯೂ ಈ ರೀತಿ ಆರೋಪ ಹೊರಿಸಲಾಗಿತ್ತು ಎಂದ ಅವರು ತುರ್ತು ಸಂದರ್ಭದಲ್ಲಿ ಪಿಎಫ್ಐ ಜನರ ಸಮಸ್ಯೆಗೆ ಸ್ಪಂದಿಸುವುದರ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ಸಂಘಟನೆ ತೊಡಗಿಸಿಕೊಂಡಿದೆ. ಕಾನೂನು ಬದ್ಧವಾಗಿ ಇದನ್ನು ಪ್ರಶ್ನಿಸುತ್ತೇವೆ ಎಂದರು.
ಈ ಸಂದರ್ಭ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಕಲೀಲ್, ಕಾರ್ಯದರ್ಶಿ ಸಫಿ, ಪಿಎಫ್ಐ ಕಾನೂನು ಸಲಹೆಗಾರ ಅಶ್ರಫ್, ನಗರಸಭಾ ಸದಸ್ಯ ಮನ್ಸೂರ್ ಅಲಿ ಸೇರಿದಂತೆ ಇನ್ನಿತರರು ಹಾಜರಿದ್ದರು.