ಸೋಮವಾರಪೇಟೆ,ಜೂ.೩: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಸಹಕಾರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ನಿAದ ಕಪೋಲಕಲ್ಪಿತ ಆರೋಪಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ನ ನಗರಾಧ್ಯಕ್ಷ ವಾಸ್ತವಾಂಶ ಅರಿತುಕೊಳ್ಳಬೇಕು ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಪಟ್ಟಣ ಪಂಚಾಯಿತಿಯಲ್ಲಿ ಶೇ.೫೦ ಕಮಿಷನ್ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಗರಾಧ್ಯಕ್ಷ ನಾಗರಾಜು ಅವರು, ಯಾರಿಗೆ ಶೇ.೫೦ ಕಮಿಷನ್ ನೀಡಿ ಕೆಲಸ ಮಾಡಿಸಿಕೊಂಡಿದ್ದಾರೆ? ಯಾವ ಕೆಲಸ ಮಾಡಿಸಿದ್ದಾರೆ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಕಳೆದೆರೆಡು ವರ್ಷಗಳಿಂದ ಕೊರೊನಾ ಸಂದರ್ಭ ಶಾಸಕ ಅಪ್ಪಚ್ಚುರಂಜನ್ ಅವರು ಮಾಡಿದ ಸೇವೆ ಇಡೀ ಜನತೆಗೆ ತಿಳಿದಿದೆ. ಪಿಪಿಇ ಕಿಟ್ ಧರಿಸಿ ಕೋವಿಡ್ ಸೆಂಟರ್ ಒಳಗೆ ಹೋದ ಪ್ರಥಮ ಶಾಸಕ ಎಂಬ ಹೆಗ್ಗಳಿಗೆ ಅಪ್ಪಚ್ಚು ರಂಜನ್ ಅವರಿಗಿದೆ. ಕೊರೊನಾ ಸಂದರ್ಭ ಯಾವುದೇ ಸಾಮಾಜಿಕ ಕಾರ್ಯ ಕೈಗೊಳ್ಳದ ಕಾಂಗ್ರೆಸ್ನವರು ಇದೀಗ ಶಾಸಕರ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಗರಾಧ್ಯಕ್ಷರಿಗೆ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಸೋಮೇಶ್ ಹೇಳಿದರು.
ಪಟ್ಟಣದ ಹೈಟೆಕ್ ಮಾರುಕಟ್ಟೆಗೆ ೬೬ ಲಕ್ಷ ರೂಪಾಯಿ ವ್ಯಯಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂಬ ಹುರುಳಿಲ್ಲದ ಆರೋಪವನ್ನು ಕಾಂಗ್ರೆಸ್ ಮಾಡಿದ್ದು, ಕಳೆದ ೧೨ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಮಾರುಕಟ್ಟೆ ದುರಸ್ತಿಗೆ ಈವರೆಗೆ ೭.೫೦ ಲಕ್ಷ ವ್ಯಯಿಸಲಾಗಿದೆ. ಶೇ.೫೦ರಷ್ಟು ಕಮಿಷನ್ ವ್ಯವಹಾರ ಅವರದೇ ಪಕ್ಷದ ಹಂಗಾಮಿ ಅಧ್ಯಕ್ಷರಿದ್ದಾಗ ಆಗಿರಬಹುದು. ಈಗ ಅಂತಹ ಕಮಿಷನ್ ವ್ಯವಹಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಗೋಷ್ಠಿಯಲ್ಲಿದ್ದ ಸದಸ್ಯ ಬಿ.ಆರ್. ಮಹೇಶ್ ಹೇಳಿದರು.
ಪ.ಪಂ. ವ್ಯಾಪ್ತಿಯಲ್ಲಿ ೧೨ ಬಾವಿಗಳ ದುರಸ್ತಿ ಕಾಮಗಾರಿಯನ್ನು ನಾಗರಾಜ್ ಅವರ ಸ್ನೇಹಿತರೇ ಮಾಡಿದ್ದಾರೆ. ಇದರಲ್ಲಿ ಬಿಜೆಪಿಯವರ ಪಾತ್ರವಿಲ್ಲ. ಬಾವಿಗಳ ದುರಸ್ತಿಗೆ ಒಂದು ವರ್ಷದ ಹಿಂದೆಯೇ ೬೬ ಸಾವಿರ ಬಿಲ್ ನೀಡಲಾಗಿದೆ ಎಂದು ಸೋಮೇಶ್ ಹೇಳಿದರು.
ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ನಗರಾಧ್ಯಕ್ಷ ನಾಗರಾಜು ಅವರು, ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರಿಂದ ದೇಣಿಗೆ ಹಣ ಸಂಗ್ರಹಿಸಿ ವರ್ಷಕ್ಕೊಮ್ಮೆ ಕಬಡ್ಡಿ ಪಂದ್ಯಾಟ ನಡೆಸುತ್ತಿದ್ದಾರೆ. ಈ ಸಂಘ ನೋಂದಣಿಯೂ ಆಗಿಲ್ಲ. ಯಾವುದೇ ಲೆಕ್ಕಪತ್ರಗಳೂ ಇಲ್ಲ. ಕಾವೇರಿ ತೀರ್ಥ ವಿತರಣೆ ಸಂದರ್ಭವೂ ವಂತಿಗೆ ಸಂಗ್ರಹಿಸಲಾಗುತ್ತಿದೆ. ಇವರುಗಳಿಗೆ ಡೊನೇಷನ್ ನಿರಾಕರಿಸಿದರೆ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಾರೆ ಎಂದು ಮಹೇಶ್ ಆರೋಪಿಸಿದರು.
ಇಂದಿರಾ ಕ್ಯಾಂಟೀನ್ಗೆ ಪ.ಪಂ.ನಿAದ ೨.೫೦ ಲಕ್ಷ ಖರ್ಚು ಮಾಡಿ ತಳಪಾಯ ನಿರ್ಮಿಸಿಕೊಟ್ಟಿದ್ದರೂ ಅವರದೇ ಸರ್ಕಾರವಿದ್ದ ಸಂದರ್ಭ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಇಂದಿರಾಗಾAಧಿ ಅಭಿಮಾನಿಗಳ ಸಂಘದ ಹೆಸರಿನಲ್ಲಿ ಕಲೆಕ್ಷನ್ ಮಾಡಿ ಕಬಡ್ಡಿ ನಡೆಸುವುದನ್ನು ಬಿಟ್ಟರೆ ಇನ್ನಾವುದೇ ಸಾಮಾಜಿಕ ಕಾರ್ಯ ನಡೆಸುತ್ತಿಲ್ಲ. ಇದು ಮಾಜಿ ಪ್ರಧಾನಿಗೆ ಮಾಡುತ್ತಿರುವ ಅವಮಾನ ಎಂದು ಮಹೇಶ್ ಟೀಕಿಸಿದರು.
ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ೩೦ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ದುರಸ್ತಿಪಡಿಸಲಾಗಿದೆ. ಹೈಟೆಕ್ ಮಾರುಕಟ್ಟೆಯ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ. ಅಭಿವೃದ್ಧಿ ಸಹಿಸದ ಕಾಂಗ್ರೆಸ್ನವರು ಅಗ್ಗದ ಪ್ರಚಾರಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಮೋಹಿನಿ, ನಾಮನಿರ್ದೇಶನ ಸದಸ್ಯ ಶರತ್ಚಂದ್ರ ಅವರುಗಳು ಉಪಸ್ಥಿತರಿದ್ದರು.