ಕೂಡಿಗೆ, ಜೂ. ೧: ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಅದರ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕು. ಅಲ್ಲದೆ ಈಗಾಗಲೇ ಘೋಷಿಸ ಲಾಗಿರುವ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಬಳಕೆ ಮಾಡುವ ಮೂಲಕ ತಮ್ಮ ಜಮೀನುಗಳಲ್ಲಿ ಮಿಶ್ರ ಬೆಳೆಗೆ ಹೆಚ್ಚು ಒತ್ತು ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೂಡಿಗೆಯ ತೋಟ ಗಾರಿಕಾ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಬೆಳೆಸಲಾದ ತೆಂಗಿನ ಗಿಡಗಳನ್ನು ಸರಕಾರ ನಿಗದಿ ಮಾಡಿದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರು ಕಾಫಿ ಬೆಳೆಯ ಜೊತೆಯಲ್ಲಿ ಮಿಶ್ರ ಬೆಳೆಗಳಾದ ಅಡಿಕೆ, ತೆಂಗು ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ತೋಟಗಾರಿಕಾ ಇಲಾಖೆಯ ಯೋಜನೆಗಳ ಸವಿಸ್ತಾರವಾದ ಮಾಹಿತಿಯನ್ನು ಸೋಮವಾರಪೇಟೆ ತಾಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ. ಡಾ. ಮಂಜುನಾಥ ಶೆಟ್ಟಿ ನೀಡಿದರು.
ವೇದಿಕೆಯಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್, ಸದಸ್ಯರಾದ ಕೆ.ಕೆ. ಭೋಗಪ್ಪ, ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಹೋಬಳಿ ಮಟ್ಟದ ಅಧಿಕಾರಿಗಳಾದ ಕಾವ್ಯ, ಆನಂದ್ ಹಾಜರಿದ್ದರು.
ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ನೂರಾರು ರೈತರು ತಮ್ಮ ಜಮೀನಿನ ದಾಖಲೆಯನ್ನು ಒದಗಿಸಿ ರಿಯಾಯಿತಿ ದರದ ಹಣವನ್ನು ನೀಡಿ ತೆಂಗಿನ ಗಿಡಗಳನ್ನು ಪಡೆದುಕೊಂಡರು. ಕೂಡಿಗೆ ತೋಟಗಾರಿಕಾ ಕೃಷಿ ಕ್ಷೇತ್ರದ ಸಹಾಯಕ ಅಧಿಕಾರಿ ಆನಂದ ಸ್ವಾಗತಿಸಿ, ಕಾವ್ಯ ವಂದಿಸಿದರು.