ಕುಶಾಲನಗರ, ಜೂ. ೧: ಕುಶಾಲನಗರ ಪಟ್ಟಣ ಮತ್ತು ನೆರೆಯ ಗ್ರಾಮಗಳನ್ನು ಪ್ರವಾಹ ಮುಕ್ತವನ್ನಾಗಿಸಲು ಶಾಶ್ವತ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಅವರು ಕುಶಾಲನಗರದ ಶೈಲಜಾ ಬಡಾವಣೆಯಲ್ಲಿ ಶಾಸಕರ ನಿಧಿಯ ರೂ. ೫ ಲಕ್ಷ ಅನುದಾನದಲಿ ನದಿತಟದಲ್ಲಿ ಕೈಗೊಂಡ ಬಂಡ್ ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದರು.

೨೦೧೮ ರಿಂದ ೩ ವರ್ಷಗಳ ಕಾಲ ನಿರಂತರವಾಗಿ ಪ್ರವಾಹಕ್ಕೆ ತುತ್ತಾಗಿದ್ದ ಶೈಲಜಾ ಬಡಾವಣೆ ನಿವಾಸಿಗಳ ಮನವಿ ಮೇರೆಗೆ ಶಾಸಕರು ತಮ್ಮ ೫ ಲಕ್ಷ ರೂಗಳ ಅನುದಾನವನ್ನು ಪ್ರವಾಹ ತಡೆಗಟ್ಟುವ ಕಾಮಗಾರಿಗೆ ನೀಡಿದ್ದರು, ಸುಮಾರು ಅರ್ಧ ಕಿಲೋಮೀಟರ್ ಉದ್ದದ ಬಂಡ್ ನಿರ್ಮಾಣ ಮೂಲಕ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಕಾವೇರಿ ನದಿಯ ಪ್ರವಾಹ ತಪ್ಪಿಸಲು ಶಾಶ್ವತ ಯೋಜನೆಗಳನ್ನು ರೂಪಿಸಲು ಈಗಾಗಲೇ ಸಂಬAಧಿಸಿದ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಸಮಸ್ಯೆಗೆ ಒಳಗಾಗಿರುವ ಜನರ ಸಂಕಷ್ಟಗಳ ಪರಿಹಾರಕ್ಕೆ ತಾನು ಕಳೆದ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಬಗ್ಗೆ ವಿವರ ಒದಗಿಸಿದರು. ತಮ್ಮ ಸುದೀರ್ಘ ರಾಜಕೀಯ ಅವಧಿಯಲ್ಲಿ ಜಿಲ್ಲೆಗೆ ಸರ್ಕಾರದ ಮೂಲಕ ಹಲವಾರು ಯೋಜನೆಗಳನ್ನು ತಂದಿರುವ ಬಗ್ಗೆ ತಿಳಿಸಿದ ರಂಜನ್, ಜಿಲ್ಲೆಯಲ್ಲಿ ಎಲ್ಲಾ ಹಂತದ ಶಿಕ್ಷಣ, ಆರೋಗ್ಯ ಕೇಂದ್ರಗಳನ್ನು ತೆರೆಯುವಲ್ಲಿ ತಾವು ಯಶಸ್ಸು ಸಾಧಿಸಿರುವುದಾಗಿ ತಿಳಿಸಿದರು. ಜನತೆಯ ಆರೋಗ್ಯದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ಕಾಳಜಿ ಹೊಂದಿದ್ದು, ಕೊಡಗು ಜಿಲ್ಲೆಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಕೂಡ ಸದ್ಯದಲ್ಲಿಯೇ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

ಶೈಲಜಾ ಬಡಾವಣೆಯ ನಿವಾಸಿಗಳ ವೇದಿಕೆ ಪ್ರಮುಖರೊಂದಿಗೆ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ರಂಜನ್ ಅವರು ನದಿ ತಟದಲ್ಲಿ ಗಿಡಗಳನ್ನು ನೆಟ್ಟರು. ನಂತರ ಬಡಾವಣೆ ನಿವಾಸಿಗಳ ಜೊತೆಗೆ ಚರ್ಚಿಸಿದ ಶಾಸಕರು ಯಾವುದೇ ಸಂದರ್ಭ ಮುಂದಿನ ದಿನಗಳಲ್ಲಿ ಪ್ರವಾಹ ತಪ್ಪಿಸುವ ಸಂಬAಧ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆಗೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಸ್ಥಳೀಯ ಬಡಾವಣೆ ನಿವಾಸಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ವಾರ್ಡ್ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಬಡಾವಣೆಯ ಪ್ರಮುಖರಾದ ವರದ, ತೋರೆರ ಉದಯಕುಮಾರ್, ಕೊಡಗನ ಹರ್ಷ, ಕ್ಯಾಪ್ಟನ್ ಸುಬ್ಬಯ್ಯ, ನಿವೃತ್ತ ಅಧಿಕಾರಿ ಗಣಪತಿ, ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಅಧ್ಯಕ್ಷ ಚಂದ್ರಮೋಹನ್ ಮತ್ತು ಶೈಲಜಾ ಬಡಾವಣೆಯ ನಿವಾಸಿಗಳು ಇದ್ದರು.