ವೀರಾಜಪೇಟೆ, ಜೂ. ೧: ರಾಜ್ಯ ಸರ್ಕಾರವು ೨೦೧೧ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ವಿಷಯದಲ್ಲಿ ನಾಗಮೋಹನ್ ದಾಸ್ ಅವರು ನೀಡಿರುವ ವರದಿಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು ಎಂದು ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕವು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.

ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ನಿಗದಿ ಮಾಡಿ ಜನಸಂಖ್ಯೆ ಅನುಗುಣವಾಗಿ ಹೆಚ್ಚಳ ಮಾಡುವಂತೆ ಹೋರಾಟಗಳು ನಡೆಯುತ್ತಿವೆ. ೨೦೧೧ರ ಜನಗಣತಿಯಲ್ಲಿ ಈ ಮೇಲಿನ ವರ್ಗಗಳ ಜನಸಂಖ್ಯೆಯು ಗಣನೀಯವಾಗ ಹೆಚ್ಚಳ ಕಂಡಿದೆ. ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್ ಅವರು ನೀಡಿರುವ ವರದಿಯಂತೆ ಪರಿಶಿಷ್ಟ ಜಾತಿಗೆ ಶೇ. ೧೫ ರಿಂದ ೧೭ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. ೩ ರಿಂದ ೭.೫ಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದಾಗಿದೆ.

ಆದರೆ, ಸರ್ಕಾರವು ಇಂದಿನವರೆಗೆ ಕ್ರಮಕ್ಕೆ ಮುಂದಾಗಿಲ್ಲ. ತಕ್ಷಣವೇ ಇದನ್ನು ಕಾರ್ಯರೂಪಕ್ಕೆ ತರುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮನವಿ ನೀಡುವ ಸಂದರ್ಭ ರಾಜ್ಯ ಸಮಿತಿಯ ಸದಸ್ಯರಾದ ಟಿ.ಎಸ್. ಗೋವಿಂದಪ್ಪ, ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮತ್ತು ಜಿಲ್ಲಾ ಸಂಘಟನಾ ಸಂಚಾಲಕ ವಿ.ಆರ್. ರಜನಿಕಾಂತ್ ಅವರು ಹಾಜರಿದ್ದರು.