ವೀರಾಜಪೇಟೆ, ಜೂ. ೧: ಇಂದಿನ ದಿನದಲ್ಲಿ ಮಹಿಳೆ ಅಬಲೆಯಲ್ಲ, ಸಬಲೆ, ತನ್ನ ಸಮಸ್ಯೆ ಪರಿಹರಿಸಲು ವಿಫಲವಾದ ಪಕ್ಷದಲ್ಲಿ ಆರಕ್ಷಕ ಠಾಣೆಯಲ್ಲಿ ತಮ್ಮ ದೂರು ನೋಂದಾಯಿಸಲು ಸರ್ವ ಸ್ವತಂತ್ರರು ಎಂದು ವೀರಾಜಪೇಟೆ ಠಾಣೆಯ ಹೆಡ್‌ಕಾನ್ಸ್ಟೇಬಲ್ ಗೀತಾ ಸಲಹೆ ನೀಡಿದರು.
ಮಹಿಳಾ ದೌರ್ಜನ್ಯ ವಿರೋಧಿ ಘಟಕದಡಿಯಲ್ಲಿ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ನೀಡುವ ದೂರುಗಳ ಬಗ್ಗೆ ಕಾನೂನು ಅರಿವು ನೀಡಿ ಮಾತನಾಡುತ್ತಾ ವಿವಿಧ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆಯುವ ದಬ್ಬಾಳಿಕೆ, ಶೋಷಣೆಯನ್ನು ಬಲವಾಗಿ ಖಂಡಿಸಿ ಅದರ ವಿರುದ್ಧ ಸಿಡಿದೇಳುವ ಹಾಗೂ ಪರಿಹರಿಸಿಕೊಳ್ಳುವ ಶಕ್ತಿ ಮಹಿಳೆಯರಿಗೆ ಇರಬೇಕು ಎಂದು ಕರೆ ನೀಡಿದರು. ವೀರಾಜಪೇಟೆ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಯು.ಟಿ. ಮಾದಯ್ಯ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಡನೆ ಸಂವಾದದಲ್ಲಿ ಪಾಲ್ಗೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಣಿ ಎಂ. ಹಾಗೂ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು. ಲಿಖಿತಾ ಪ್ರಾರ್ಥಿಸಿ, ಶಾಹಿರ ಸ್ವಾಗತಿಸಿ, ಮೇರಿ ರೆಜಿನಾ ವಂದಿಸಿ, ಭೂಮಿಕ ಹಾಗೂ ಪೂಜಾಶ್ರೀ ಕಾರ್ಯಕ್ರಮ ನಿರೂಪಿಸಿದರು.