ಮಡಿಕೇರಿ, ಜೂ. ೧: ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಯುವ ಒಕ್ಕೂಟ, ಜಿಲ್ಲಾ ಪಂಚಾಯತ್, ನಗರಸಭೆ, ಕಾವೇರಿ ಕಲಾವೃಂದ ಇವುಗಳ ಸಂಯುಕ್ತಾಶ್ರಯದಲ್ಲಿ ತಾ. ೩ರಂದು ಮಡಿಕೇರಿಯಲ್ಲಿ ಬೈಸಿಕಲ್ ಜಾಥಾ ಆಯೋಜಿಸಲಾಗಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆ.ಟಿ.ಕೆ. ಉಲ್ಲಾಸ್, ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ಮಾಹಿತಿ ನೀಡಿದರು. ಆಜಾದಿಕ ಅಮೃತಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ಬೈಕ್ ಜಾಥಾ ಆಯೋಜಿಸಲಾಗಿದ್ದು, ೭೫ ರಿಂದ ೧೦೦ ಮಂದಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ ೮.೩೦ ಗಂಟೆಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಎಸ್ಪಿ ಎಂ.ಎ. ಅಯ್ಯಪ್ಪ, ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ ಹಾಜರಿರುತ್ತಾರೆ. ಜಾಥಾವು ಕೋಟೆಯಿಂದ ಹಳೆ ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆ, ಕಾವೇರಿ ಹಾಲ್, ಹೊಸ ಖಾಸಗಿ ಬಸ್ ನಿಲ್ದಾಣ, ರೇಸ್‌ಕೋರ್ಸ್ ರಸ್ತೆ, ರಾಜಾಸೀಟು, ಎಂ.ಎA. ವೃತ್ತ, ಜಿ.ಟಿ. ವೃತ್ತ, ಮೈಸೂರು ರಸ್ತೆ ಮೂಲಕ ಫೀ.ಮಾ. ಕಾರ್ಯಪ್ಪ ವೃತ್ತಕ್ಕೆ ತೆರಳಿ ಕೋಟೆಗೆ ಮರಳಲಿದೆ. ಬಳಿಕ ಬೆಳಿಗ್ಗೆ ೧೦ ಗಂಟೆಗೆ ಕೋಟೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸುಜಾ ಕುಶಾಲಪ್ಪ, ವೀಣಾ ಅಚ್ಚಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ತಾಲೂಕು ಯುವ ಒಕ್ಕೂಟ ಮಾಜಿ ಅಧ್ಯಕ್ಷ ಸಾಬ ಸುಬ್ರಮಣಿ ಉಪಸ್ಥಿತರಿದ್ದರು.