ಸೋಮವಾರಪೇಟೆ, ಜೂ. ೧: ಇಲ್ಲಿನ ಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಶೇ. ೧೦೦ ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಶಾಸಕ ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ರಾಷ್ಟಿçÃಯ ಸಂಪತ್ತು, ಭವ್ಯ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದ್ದು, ಅಂತಹವರಿಗೆ ವಿದ್ಯಾದಾನ ಮಾಡುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಪ್ರಶಂಶಿಸಿದರು.

ಈ ಬಾರಿ ತಾಲೂಕಿನ ೭ ಸರ್ಕಾರಿ ಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿರುವುದು ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಮ್ಮೆ ಎನಿಸಿದೆ. ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕು. ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರು ಕಲಿತು ನಂತರ ಬೋಧನೆ ಮಾಡಬೇಕು. ಮಕ್ಕಳು ಗೂಗಲ್ ಮೂಲಕ ಉತ್ತರ ಹುಡುಕುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಶಿಕ್ಷಕರು ಹೇಳಿದ ಉತ್ತರ ಸರಿಯಿಲ್ಲದಿದ್ದರೆ, ವಿದ್ಯಾರ್ಥಿಗಳು ಶಾಲೆಯನ್ನು ತ್ಯಜಿಸುವ ನಿರ್ಧಾರ ಮಾಡಬಹುದು. ಈ ಕಾರಣದಿಂದ ಶಿಕ್ಷಕರು ದಿನಂಪ್ರತಿ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

೬೨೫ಕ್ಕೆ ೬೨೨ ಅಂಕ ಪಡೆದ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಪೂರ್ವಿ ಜಗದೀಶ್, ಸೋಮವಾರಪೇಟೆ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪಿ.ಬಿ. ಸಿಂಚನ, ೬೨೧ ಅಂಕಗಳನ್ನು ಪಡೆದ ಸೇಕ್ರೆಡ್ ಹಾರ್ಟ್ನ ಸಿ.ವಿ. ಕೀರ್ತನಾ, ಫಾತಿಮಾ ಕುಶಾಲನಗರದ ಕೆ. ಗಾಯಿತ್ರಿ, ಕೊಡ್ಲಿಪೇಟೆ ಸದಾಶಿವಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಬಿ.ವಿ. ಮಾನ್ಯಶ್ರೀ ಅವರುಗಳನ್ನು ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಡಿಡಿಪಿಐ ವೇದಮೂರ್ತಿ, ಮಂಗಳೂರು ಶಿಕ್ಷಣ ಶಿಕ್ಷಕ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರುಕ್ಸನಾ, ಬಿಇಒ ಕೆ.ವಿ. ಸುರೇಶ್, ಡಯಟ್ ಪ್ರಾಂಶುಪಾಲ ಮಲ್ಲೇಶಪ್ಪ, ಬಿಆರ್‌ಸಿ ಜಿ.ಎಂ. ಹೇಮಂತ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವ ಪಲ್ಲೇದ್, ಡಯಟ್ ಉಪನ್ಯಾಸಕ ಕೆ.ವಿ. ನಾರಾಯಣ, ಕುವೆಂಪು ಶಾಲೆಯ ಮುಖ್ಯಶಿಕ್ಷಕಿ ಮಿಲ್ಡೆçಡ್ ಗೊನ್ಸಾಲ್ವೆಸ್ ಇದ್ದರು.