ಕುಶಾಲನಗರ, ಮೇ ೩೧: ಕುಶಾಲನಗರ ನೂತನ ತಾಲೂಕು ಕಂದಾಯ ಭವನಕ್ಕೆ ರೂ ೧೦ ಕೋಟಿ ಅನುದಾನ ಕೋರಿ ಕಂದಾಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ತಿಳಿಸಿದರು. ಕುಶಾಲನಗರದಲ್ಲಿ ಹೋಬಳಿ ನಾಡಕಚೇರಿಗೆ ಚಾಲನೆ ನೀಡಿ ಮನೆ ಸ್ಥಳದ ಸಕ್ರಮೀಕರಣ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ನೂತನ ತಾಲೂಕಿನ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುಸಜ್ಜಿತ ತಾಲೂಕು ಕಚೇರಿ ಆದಷ್ಟು ಬೇಗನೆ ನಿರ್ಮಾಣವಾಗಲಿದೆ. ಪಟ್ಟಣದ ಪ್ರಸಕ್ತ ತಾಲೂಕು ಕಚೇರಿ ೧.೫ ಎಕರೆ ಸ್ಥಳದಲ್ಲಿ ಬಹುಮಹಡಿ ಕಟ್ಟಡ ಕಟ್ಟುವ ಮೂಲಕ ತಾಲೂಕಿಗೆ ಅವಶ್ಯವಿರುವ ೧೪ ಇಲಾಖೆಗಳನ್ನು ಒಂದೇ ಕಡೆ ಕರ್ತವ್ಯ ನಿರ್ವಹಿಸುವಂತೆ ಮಾಡುವ ಯೋಜನೆ ಇರುವುದಾಗಿ ಹೇಳಿದರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೂಡಿಗೆ ಮಿನಿ ವಿಮಾನ ನಿಲ್ದಾಣ ಸೇರಿದಂತೆ ಹಾರಂಗಿ ಜಲಾಶಯದಲ್ಲಿ ಸೀಪ್ಲೇನ್ ಯೋಜನೆ ಬಗ್ಗೆ ಚಿಂತನೆ ಹರಿಸಲಾಗಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆದಿದೆ. ಜಿಲ್ಲೆಯಲ್ಲಿ ೨೫ ಕೋಟಿ ರೂ. ವೆಚ್ಚದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಮಂಜೂರಾತಿ ದೊರೆತಿದೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ್ದು ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲ ರೋಗಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ ನೀಡುವ ಯೋಜನೆ ಕಲ್ಪಿಸಲಾಗುತ್ತಿದೆ ಎಂದರು. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕಚೇರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.
೯೪ಅ ಹಕ್ಕುಪತ್ರವನ್ನು ಯಾವುದೇ ಸಂದರ್ಭ ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು, ಒಂದು ವೇಳೆ ಮಾರಾಟವಾದರೆ ಸರಕಾರದ ಸೌಲಭ್ಯ ರದ್ದುಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಹೋಬಳಿ ವ್ಯಾಪ್ತಿಯ ೫೧ ಮಂದಿ ಫಲಾನುಭವಿಗಳಿಗೆ ಮನೆ ಸ್ಥಳದ ಸಕ್ರಮೀಕರಣ ಹಕ್ಕುಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ ಪ್ರಕಾಶ್, ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷ ಸುರಯ್ಯ ಬಾನು, ಎಂ.ಎನ್ ಕುಮಾರಪ್ಪ, ಉಪತಹಶೀಲ್ದಾರ್ ಮಧುಕುಮಾರ್, ಶಿವಪ್ಪ, ಕಂದಾಯ ಅಧಿಕಾರಿಗಳಾದ ಸಂತೋಷ್, ಪ್ರಶಾಂತ್ ಗ್ರಾಮ ಲೆಕ್ಕಿಗರಾದ ಪೀರ್ ಮಹಮ್ಮದ್, ಗುರು, ಗೌತಮ್, ಸಚಿನ್, ನಾಗೇಂದ್ರ, ಶಿರಸ್ತೇದಾರ್ ಅನಿತಾ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.