ಗೋಣಿಕೊಪ್ಪಲು, ಮೇ ೩೧: ಕಳೆದ ಮೂರು ದಿನಗಳಿಂದ ಹುಲಿ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಯಾಚರಣೆ ತಂಡವು ಬಿ. ಶೆಟ್ಟಿಗೇರಿ ಭಾಗದ ಕಂಡೆಮನೆ ಎಂಬ ಸ್ಥಳದಲ್ಲಿ ಠಿಕಾಣಿ ಹೂಡಿದೆ.

ಗ್ರಾಮಸ್ಥರಿಗೆ ಹಾಗೂ ಅರಣ್ಯ ಇಲಾಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿರುವ ಹುಲಿಯನ್ನು ಹಿಡಿದೇ ತೀರುವ ನಿಟ್ಟಿನಲ್ಲಿ ನೂತನ ಸಿಸಿಎಫ್ ಬಿ.ಎನ್. ಮೂರ್ತಿ ರಾತ್ರಿಯಿಡೀ ಸಹ ಸಿಬ್ಬಂದಿಗಳೊAದಿಗೆ ಸ್ಥಳದಲ್ಲಿ ಮೊಖಂ ಹೂಡಿದ್ದಾರೆ.

ಹಸುವಿನ ಕಳೆಬರದ ಬಳಿ ಹುಲಿ ಬರಬಹುದು ಎಂಬ ವಿಶ್ವಾಸದ ಮೇಲೆ ನುರಿತ ಇಬ್ಬರು ವೈದ್ಯರು ಹಾಗೂ ಶೂಟರ್ ಅಟ್ಟಣಿಕೆಯಲ್ಲಿ ರಾತ್ರಿಯಿಡೀ ಹುಲಿಯ ಆಗಮನಕ್ಕಾಗಿ ಕಾದು ಕುಳಿತರೂ ಕೂಡ ಹುಲಿಯು ಹಸುವಿನ ಕಳೇಬರದ ಬಳಿ ಸುಳಿಯಲಿಲ್ಲ.

ನುರಿತ ಸಿಬ್ಬಂದಿಗಳು, ಹುಲಿಯ ಸೆರೆಗೆ ಬೇಕಾದ ಬೋನ್ ಸಹಿತ ಬಲೆ ಇತ್ಯಾದಿ ಪರಿಕರಗಳೊಂದಿಗೆ ತಯಾರಿಯಾಗಿದ್ದರೂ ಹುಲಿ ಮಾತ್ರ ಪತ್ತೆಯಾಗುತ್ತಿಲ್ಲ.

ಕಳೆದ ಮೂರು ದಿನಗಳಿಂದ ಹುಲಿಯ ಚಲನವಲನಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ತಂಡ ವಿಶೇಷ ಪ್ರಯತ್ನ ಮುಂದುವರಿಸಿದೆ.

ರಾತ್ರಿಯಿಡೀ ನಿದ್ರೆ ಇಲ್ಲದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಷ್ಟ ಎದುರಿಸುತ್ತಿದ್ದಾರೆ. ಹುಲಿಯನ್ನು ಸೆರೆ ಹಿಡಿಯಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಕ್ಯಾಮೆರಾಗಳನ್ನು ಇಟ್ಟು ಹುಲಿಯ ಚಿತ್ರ ಸೆರೆಗೆ ಪ್ರಯತ್ನ ಮುಂದುವರಿದಿದೆ. ಎರಡು ಹುಲಿಗಳನ್ನು ಸೆರೆ ಹಿಡಿಯಲು ಈಗಾಗಲೇ ಇಲಾಖೆಯ ಅನುಮತಿ ದೊರೆತಿವೆ.

ಮೃಘಾಲಯದಿಂದ

ಆಗಮಿಸಿದ ವೈದ್ಯರು

ನಾಗರಿಕರನ್ನು ಬೆಚ್ಚಿ ಬೀಳಿಸುವಂತಹ ಘಟನೆಗಳು ಈ ಭಾಗದಲ್ಲಿ ಮರುಕಳಿಸುತ್ತಿರುವುದರಿಂದ ಹುಲಿಯನ್ನು ಹಿಡಿದೇ ತೀರುವ ನಿಟ್ಟಿನಲ್ಲಿ ಸಿಸಿಎಫ್ ಮೂರ್ತಿಯವರು ಅನುಭವಿ ವೈದ್ಯರನ್ನು ಕ್ಯಾಂಪ್‌ಗೆ ಕರೆಯಿಸಿ ಕೊಂಡಿದ್ದಾರೆ.

(ಮೊದಲ ಪುಟದಿಂದ) ಮೈಸೂರಿನ ಚಾಮರಾಜೇಂದ್ರ ಮೃಘಾಲಯದ ವೈದ್ಯ ಡಾ. ಪ್ರಶಾಂತ್ ಮಂಗಳವಾರ ಮುಂಜಾನೆ ಆಗಮಿಸಿದ್ದಾರೆ. ಇವರೊಂದಿಗೆ ಇತರ ಇಬ್ಬರು ವೈದ್ಯರು ಹಾಗೂ ದುಬಾರೆಯ ಡಿಆರ್‌ಎಫ್‌ನ ಶಾರ್ಪ್ ಶÀÆಟರ್ ರಂಜನ್ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದು ವೇಳೆ ಕಾರ್ಯಾಚರಣೆ ಸಂದರ್ಭ ಹುಲಿಯು ಆಕ್ರೋಶಗೊಂಡು ಅಟ್ಟಣಿಗೆಯ ಬಳಿ ಆಗಮಿಸಿ ಮೇಲೆ ಹಾರುವ ಪ್ರಯತ್ನ ನಡೆಸಬಹುದು ಎಂಬ ಕಾರಣಕ್ಕಾಗಿ ಅಟ್ಟಣಿಕೆಯನ್ನು ೨೦ ಅಡಿಗೆ ಎತ್ತರಿಸಲಾಗಿದೆ ಹಾಗೂ ವೈದ್ಯರು, ಶೂಟರ್ ಕುಳಿತುಕೊಂಡು ಕೆಲಸ ನಿರ್ವಹಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಹುಲಿಯು ಸಂಜೆ ಅಥವಾ ಮುಂಜಾನೆ ವೇಳೆ ಹಸುವಿನ ಕಳೇಬರದ ಬಳಿ ಆಗಮಿಸಬಹುದು ಎಂಬ ನಿರೀಕ್ಷೆಯೊಂದಿಗೆ ಅಧಿಕಾರಿಗಳು ಕಾಯುತ್ತಿದ್ದಾರೆ.

ಚಿತ್ರ, ವರದಿ: ಹೆಚ್.ಕೆ. ಜಗದೀಶ್