*ಗೋಣಿಕೊಪ್ಪ, ಮೇ ೩೧: ರೂ. ೧ ಕೋಟಿ ೯೬ ಲಕ್ಷದ ೪೮ ಸಾವಿರ ಅನುದಾನದಲ್ಲಿ ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಜಲ್‌ಜೀವನ್ ಯೋಜನೆ ಅನುಷ್ಠಾನಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದಲ್ಲಿ ೨ ಸಾವಿರ ಲೀ. ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ರೂ. ೪೭.೨೦ ಲಕ್ಷದಲ್ಲಿ ೧೩೧ ಮನೆಗಳಿಗೆ ೨೩೦೦ ಮೀ. ಪೈಪ್‌ಲೈನ್ ಅಳವಡಿಕೆಯ ಮೂಲಕ ಕುಡಿಯುವ ನೀರು ಸಂಪರ್ಕವನ್ನು ಈ ಭಾಗದಲ್ಲಿ ಒದಗಿಸಲಾಗುತ್ತಿದೆ. ಅದೇ ರೀತಿಯಲ್ಲಿ ಹುದೂರು ಗ್ರಾಮದಲ್ಲಿ ೪೩.೮೭ ಲಕ್ಷ ಅನುದಾನದಲ್ಲಿ ೮೭ ಮನೆಗಳಿಗೆ ೨ ಸಾವಿರ ಲೀ. ಟ್ಯಾಂಕ್ ನಿರ್ಮಾಣದೊಂದಿಗೆ ೨೭೦೦ ಮೀ. ಪೈಪ್‌ಲೈನ್ ಅಳವಡಿಕೆಯ ಕಾರ್ಯದೊಂದಿಗೆ ಕುಡಿಯುವ ನೀರು ನೀಡಲಾಗುವುದು.

ಅರುವತ್ತೊಕ್ಲು ಗ್ರಾಮದಲ್ಲಿ ೩ ಸಾವಿರ ಲೀ. ಟ್ಯಾಂಕ್ ನಿರ್ಮಾಣದೊಂದಿಗೆ ೪೭೦೦ ಮೀ. ಪೈಪ್‌ಲೈನ್ ಅಳವಡಿಕೆಯಲ್ಲಿ ೫೦೬ ಮನೆಗಳಿಗೆ ೬೭.೧೭ ಲಕ್ಷದಲ್ಲಿ ಕುಡಿಯುವ ನೀರು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಗುಟಗೇರಿ ಗ್ರಾಮದಲ್ಲಿ ೨೦೦೦ ಮೀ. ಪೈಪ್‌ಲೈನ್ ಅಳವಡಿಸಿ ಮತ್ತು ನೀರಿನ ಟ್ಯಾಂಕ್ ನಿರ್ಮಿಸಿ ೫೯ ಮನೆಗಳಿಗೆ ೩೮.೨೪ ಲಕ್ಷ ಅನುದಾನವನ್ನು ಬಳಸಿ ಜಲ್‌ಜೀವನ್ ಯೋಜನೆಯನ್ನು ಸಮರ್ಪಕವಾಗಿ ಪಂಚಾಯಿತಿ ವ್ಯಾಪ್ತಿಯ ಜನರಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.

ಅಕ್ರಮ ಸಕ್ರಮ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ಮನೆಯಪಂಡ ಸೋಮಣ್ಣ, ಉಪಾಧ್ಯಕ್ಷೆ ಜಮ್ಮಡ ಎ. ಸೌಮ್ಯ, ಸದಸ್ಯರುಗಳಾದ ಕಳ್ಳಿಕಂಡ ನವೀನ್ ಕುಮಾರ್, ಮನೆಯಪಂಡ ಪ್ರಾಣ್ ಬೋಪಣ್ಣ, ತೀತಮಾಡ. ಕೆ. ಸೋಮಯ್ಯ, ಎ.ಎ. ಚಂಗಪ್ಪ, ಎಂ.ಕೆ. ಲಲಿತಾ, ಸಿ.ಪಿ. ದಮಯಂತಿ, ಪಿ.ಪಿ. ಭಾಗ್ಯವತಿ, ಶರೀಫ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ನಾರಾಯಣ, ಜಿ.ಪಂ. ಇಂಜಿನಿಯರ್ ಮಹಾದೇವ್, ಜಲಜೀವನ್ ಯೋಜನೆ ಅಭಿಯಂತರರಾದ ಯೋಗೇಶ್ ಗೌಡ, ಸಹಾಯಕ ಇಂಜಿನಿಯರ್ ಸುನೀಲ್ ಇದ್ದರು.