ಶ್ರೀಮಂಗಲ, ಮೇ. ೩೦ : ಮಾಜಿ ಸೈನಿಕರ ಸಂಘಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸ ಬೇಕು. ಈ ಮೂಲಕ ಮಾಜಿ ಸೈನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತಾಗಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ಅವರು ಕರೆ ನೀಡಿದರು.

ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ವತಿಯಿಂದ ನಡೆದ ಸಂಘದ ೩ನೇ ಸಂತೋಷಕೂಟ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ಅವರು ಮಾತನಾಡಿ ಮಾಜಿ ಸೈನಿಕರ ಸಮಸ್ಯೆ ಬಗೆಹರಿಸಲು ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಮಾಜಿ ಸೈನಿಕರ ಅದಾಲತ್ ಕರೆಯಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ತಾಲೂಕು ಮಟ್ಟದ ಜನಸಂಪರ್ಕ ಸಭೆ ಕರೆದು ಅಲ್ಲಿ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆ. ಹಾಗೆಯೇ ಈಗಿನ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯ ಮಾಜಿ ಸೈನಿಕರನ್ನು ಗುರುತಿಸಬೇಕು ಹಾಗೂ ಅವರ ಕುಂದು ಕೊರತೆ ಪರಿಹಾರಕ್ಕೆ ತಾಲೂಕು ಮಟ್ಟದ ಪೊಲೀಸ್ ಜನಸಂಪರ್ಕ ಸಭೆ ಕರೆಯುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಸೈನಿಕರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತ್ವರಿತ ಮಂಜೂರು ಮಾಡಿಕೊಡಬೇಕು. ಕಳೆದ ಹಲವು ವರ್ಷಗಳಿಂದ ಮಾಜಿ ಸೈನಿಕರ ಜಾಗ ಮಂಜೂರಾತಿ ಕಡತ ವಿಲೇವಾರಿ ಆಗಿಲ್ಲ ಎಂದು ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇ.ಸಿ.ಹೆಚ್.ಎಸ್. ಆಸ್ಪತ್ರೆ ಸೇವೆ ಮತ್ತು ಸೌಲಭ್ಯ ಗುಣಮಟ್ಟ ದಿಂದಿಲ್ಲ. ಒಂದು ಸ್ಕಾö್ಯನಿಂಗ್ ಮಾಡಲು ಮಂಗಳೂರು, ಮೈಸೂರಿಗೆ ಹೋಗಬೇಕಾಗಿದೆ, ಜಿಲ್ಲೆಗೆ ಉತ್ತಮ ಆಸ್ಪತ್ರೆ ಬೇಕಾಗಿದೆ, ಆರ್ಮಿ ಕ್ಯಾಂಟೀನ್ ಅನ್ನು ಗೋಣಿಕೊಪ್ಪಕ್ಕೆ ವಿಸ್ತರಿಸಲು ಸಮಾಲೋಚನೆ ನಡೆದಿದೆ ಎಂದರು. ಮಾಜಿ ಸೈನಿಕರ ಮಕ್ಕಳನ್ನು ಸೇನೆಗೆ ಸೇರಿಸಲು ಹಿಂದೇಟು ಬೇಡ, ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಉತ್ತಮ ಉನ್ನತ ಶಿಕ್ಷಣ ನೀಡಿದಾಗ ಸ್ವತಃ ಅವರೇ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದ ಅವರು ನಿವೃತ್ತಿ ನಂತರ ಮಾಜಿ ಸೈನಿಕರು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಕರೆ ನೀಡಿದರು.

ವಿಶೇಷ ಆಹ್ವಾನಿತರಾದ ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್ ಅವರು ಮಾತನಾಡಿ ಭಾರತದ ಬಲಿಷ್ಠ ಸೇನೆ ಮತ್ತು ಸೈನಿಕರು ನಮ್ಮ ಹೆಮ್ಮೆ. ಸೇನಾ ಪರಂಪರೆಯ ಕೊಡಗಿನ ಕೊಡುಗೆ ದೇಶದ ಸೇನೆಗೆ ಬಹುದೊಡ್ದದ್ದಾಗಿದೆ. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಾಜಿ ಸೈನಿಕರ ಸಮಸ್ಯೆ ಮತ್ತು ಭೂ ದಾಖಲಾತಿ, ಒತ್ತುವರಿ ಭೂಮಿ ಮಂಜೂರಾತಿಯ ಬಹಳಷ್ಟು ಕಡತ ಬಾಕಿ ಇದ್ದು, ಇವುಗಳನ್ನು ಕಾನೂನು ವ್ಯಾಪ್ತಿಯಲ್ಲಿ ಆದಷ್ಟು ವಿಲೇವಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಸೈನಿಕರ ಸಂಘದ ಮನವಿಯಂತೆ ಸಂಘದ ಕಟ್ಟಡ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವುದಾಗಿ ಮತ್ತೋರ್ವ ಅತಿಥಿಯಾಗಿದ್ದ ಎ. ಎಸ್. ಪೊನ್ನಣ್ಣ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಟ್ಟೆರ ವಿಶ್ವನಾಥ್ ಅವರು ಮಾಜಿ ಸೈನಿಕರನ್ನು ಸಮಾಜ ಗೌರವಿಸಬೇಕಾಗಿದೆ. ಹಗಲು ರಾತ್ರಿ ದೇಶದ ಗಡಿಯನ್ನು ಕಾಯುವ ಯೋಧರಿಂದ ದೇಶದಲ್ಲಿ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದರು.

ಸಹ ಕಾರ್ಯದರ್ಶಿ ಅಪ್ಪಚ್ಚಂಗಡ ಮೋಟಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾಜಿ ಸೈನಿಕರು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿರುವ ಜಾಗವನ್ನು ಸರಕಾರ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ತೆರವುಗೊಳಿಸಲು ಮುಂದಾದ ಸಂದರ್ಭ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ಮಾಜಿ ಸೈನಿಕರು ಮತ್ತು ಬೆಳೆಗಾರರ ಜಾಗವನ್ನು ಕಾಪಾಡಿದ್ದಾರೆ. ಸರಕಾರ ಏಕ ಗವಾಕ್ಷಿ ಮೂಲಕ ಮಾಜಿ ಸೈನಿಕ ಒತ್ತುವರಿ ಜಾಗ ಮಂಜೂರಾತಿ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಜಾಗ ಲಭ್ಯವಿಲ್ಲದವರಿಗೆ ಜಾಗ ಗುರುತಿಸಿ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಕಟ್ಟೆರ ಎ. ವಿಶ್ವನಾಥ್, ಉಪಾಧ್ಯಕ್ಷ ಮನ್ನೆರ ಎ. ರಮೇಶ್, ಕಾರ್ಯದರ್ಶಿ ಮೀದೇರಿರ ಬಿ. ಸುರೇಶ್, ಖಜಾಂಚಿ ಚಂಗುಲAಡ ಎಂ. ಸತೀಶ್, ಸಹ ಕಾರ್ಯದರ್ಶಿ ಅಪ್ಪಚ್ಚಂಗಡ ಪಿ. ಮೋಟಯ್ಯ, ಸದಸ್ಯರುಗಳಾದ ಮಂದಮಾಡ ಎ. ಬೆಳ್ಯಪ್ಪ, ಚೊಟ್ಟೆಯಾಂಡಮಾಡ ಯು. ಗೋಕುಲ, ಮಚ್ಚಮಾಡ ಮನು ಸೋಮಯ್ಯ, ಚೆಟ್ಟಂಗಡ ಸಿ. ಪುಣ್ಯವತಿ, ಕೈಬುಲೀರ ಬಿ.ಪಾರ್ವತಿ, ಚೆಟ್ಟಂಗಡ ವಿಜಯ, ಗೌ. ಸಲಹೆಗಾರ ಕಾಳಿಮಾಡ ಮುತ್ತಣ್ಣ, ಕಾನೂನು ಸಲಹೆಗಾರ ಮಂಡೇಟಿರ ಸುಬ್ರಮಣಿ, ಸಂಘದ ಮಾಜಿ ಅಧ್ಯಕ್ಷ ಚೆಟ್ಟಂಗಡ ಕಾರ್ಯಪ್ಪ ಅವರು ವೇದಿಕೆಯಲ್ಲಿ ಹಾಜರಿದ್ದರು.

ಚಂಗುಲAಡ ಅಶ್ವಿನಿ ಸತೀಶ್ ಪ್ರಾರ್ಥಿಸಿದರು. ಕಟ್ಟೆರ ವಿಶ್ವನಾಥ್ ಸ್ವಾಗತಿಸಿ, ಅಪ್ಪಚ್ಚಂಗಡ ಮೋಟಯ್ಯ ಅತಿಥಿ ಪರಿಚಯ ಮಾಡಿದರು. ಕಾಳಿಮಾಡ ಮುತ್ತಣ್ಣ ವಂದಿಸಿದರು. ಸಭೆಯ ನಂತರ ಮಾಜಿ ಸೈನಿಕರ ಕುಟುಂಬದವರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.