ಸುಂಟಿಕೊಪ್ಪ, ಮೇ ೩೧: ಜಿಲ್ಲಾ ಎಸ್.ಡಿ.ಟಿ.ಯು. ಸಮಿತಿಯ ವತಿಯಿಂದ ದ್ವಾರಕಾ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗಾಗಿ ಮಾಹಿತಿ ಶಿಬಿರ ಕಾರ್ಯಕ್ರಮ ಏರ್ಪಡಿಸಲಾಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಫಜಲುಲ್ಲಾ ಖಾನ್ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಯಾವುದೇ ಅವಘಡ ಸಂಭವಿಸಿ ಮೃತಪಟ್ಟರೇ ಅವರಿಗೆ ಸರ್ಕಾರದಿಂದ ಸೌಲಭ್ಯ, ಸವಲತ್ತು ದೊರೆಯಲಿದೆ. ಈ ಬಗ್ಗೆ ಗಮನಹರಿಸಬೇಕು ಎಂದರು. ತೋಟದ ಮಾಲೀಕರು ಮತ್ತು ಕಟ್ಟಡ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಸೇರಿಸುವ ಮೊದಲು ಅವರಿಗೆ ಜೀವವಿಮೆ ಮಾಡಿಸಬೇಕು. ಈ ಬಗ್ಗೆ ಸಮಿತಿ ಸದಾ ಕಾರ್ಮಿಕರ ಜೊತೆಗಿರಲಿದೆ. ತೋಟಗಳಲ್ಲಿ ಕಾರ್ಮಿಕರ ಮೇಲೆ ಕಾಡಾನೆ ಧಾಳಿ ನಡೆಸಿದಾಗ ಸರ್ಕಾರ ರೂ. ೫ ಲಕ್ಷ ಪರಿಹಾರ ನೀಡುತ್ತಿದೆ. ಆದರೆ ಸಂಸಾರವನ್ನು ಸರಿದೂಗಿಸಲು ರೂ. ೧೦ ಲಕ್ಷವಾದರೂ ಪರಿಹಾರ ನೀಡಬೇಕು. ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದರು.

ಕಾರ್ಮಿಕರಿಗೆ ಸರ್ಕಾರದಿಂದ ನೀಡುವ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಅದು ಇದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರಕಲಿದೆ. ಈ ಕಾರ್ಡ್ ಪಡೆದುಕೊಳ್ಳುವ ವೇಳೆ ಸರ್ಕಾರ ನಿಗದಿಪಡಿಸದ ಶುಲ್ಕವನ್ನು ಮಾತ್ರ ಸೇವಾಸಿಂಧುಗಳಲ್ಲಿ ನೀಡಬೇಕು. ಹೆಚ್ಚುವರಿ ಶುಲ್ಕ ಪಡೆದುಕೊಂಡರೆ ಸಮಿತಿಗೆ ಮಾಹಿತಿ ನೀಡುವಂತೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವಂತೆ ಮನವಿಮಾಡಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ಅಣ್ಣಾ ಶರೀಫ್ ವಹಿಸಿದ್ದರು. ಸಂಘಟನೆಯ ರಾಜ್ಯ ಸದಸ್ಯ ಮತ್ತು ಕೊಡಗು ಉಸ್ತುವಾರಿ ಖಾದರ್ ಪರಂಗಿಪೇಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೂಫ್ ಪಾಲಿಬೆಟ್ಟ, ಸ್ಥಳೀಯ ಸಂಘಟನೆಯ ಉಸ್ತುವಾರಿ ಜಕ್ರೀಯಾ ಕೊಡ್ಲಿಪೇಟೆ, ಉಪಾಧ್ಯಕ್ಷ ಅಬ್ದುಲ್ ರಜಾಕ್ ಮಡಿಕೇರಿ, ಮುಖಂಡರಾದ ಕಲೀಲ್ ಮಡಿಕೇರಿ, ಕೆ.ಎ. ಉಸ್ಮಾನ್ ಸುಂಟಿಕೊಪ್ಪ, ಶಫಿ ಕುಶಾಲನಗರ ಸೇರಿದಂತೆ ಇತರರು ಇದ್ದರು.

ಸುಮಾರು ೭೫ ರಷ್ಟು ಕಾರ್ಮಿಕರು ಪಾಲ್ಗೊಂಡಿದ್ದರು.