ಕಣಿವೆ, ಮೇ ೨೮: ಹಾರಂಗಿ ಹಾಗೂ ಕಾವೇರಿ ನದಿಗಳ ಸಂಗಮ ಕೂಡಿಗೆಯ ಸರ್ಕಾರಿ ಕೃಷಿ ಫಾರಂ ಒಳಗಿನ ೫೦ ಏಕರೆ ವಿಶಾಲ ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಬಹು ದಿನಗಳ ಕನಸು ನನಸಾಗುವ ಹಂತದಲ್ಲಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ತಾ.೩೦ರಂದು (ನಾಳೆ) ಭೇಟಿ ನೀಡಿ ಸ್ಥಳ ಪರಿಶೀಲಿಸಲಿದ್ದಾರೆ.
ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರವು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಿರುವ ಹೊಸದಾದ ನಾಲ್ಕು ಮಿನಿ ವಿಮಾನ ನಿಲ್ದಾಣಗಳ ಪೈಕಿ ಕೂಡಿಗೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಈ ಮಿನಿ ವಿಮಾನ ನಿಲ್ದಾಣವೂ ಒಂದಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ೨೦೧೨ರಲ್ಲಿ ಶಾಸಕ ಅಪ್ಪಚ್ಚು ರಂಜನ್ ಯುವ ಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಸಂದರ್ಭ ಕೊಡಗು ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಅಂದು ಪ್ರಾದೇಶಿಕ ಸಂಪರ್ಕ ಯೋಜನೆಯಡಿ (ಉಡಾನ್) ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕುಶಾಲನಗರವನ್ನು ಆಯ್ಕೆ ಮಾಡಿತ್ತು.
ಈ ಹಿಂದೆ ಬ್ಯಾಡಗಟ್ಟ, ಮಾದಾಪುರ ಹಾಗೂ ಕೂಡಿಗೆ ಬಳಿ ವಿಮಾನಯಾನ ಪ್ರಾಧಿಕಾರದ ತಜ್ಞರ ತಂಡ ಸ್ಥಳ ಪರಿಶೀಲನೆ ಮಾಡಿ ಕೂಡಿಗೆಯ ಸೈನಿಕ ಶಾಲೆ ಹಿಂಬದಿಯಲ್ಲಿನ ಕೂಡಿಗೆಯ ಸರ್ಕಾರಿ ಕೃಷಿ ಫಾರಂಗೆ ಸೇರಿದ ಭತ್ತ ಬೆಳೆಯುತ್ತಿದ್ದ ವಿಶಾಲ ಪ್ರದೇಶವನ್ನು ಅಂತಿಮಗೊಳಿಸಿತ್ತು.
ಉಡಾನ್ ಯೋಜನೆಯಡಿ ಬಳ್ಳಾರಿ, ಕಾರವಾರ, ಕೋಲಾರ ಹಾಗೂ ಕೊಡಗಿನ ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆಗೊಳ್ಳುತ್ತಿದೆೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಾದೇಶಿಕ ಸಂಪರ್ಕ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದ್ದು, ಬಿಡ್ ಆಹ್ವಾನಿಸಿದ್ದು, ರೀಜನಲ್ ಕನೆಕ್ಟಿವಿಟಿ ಸ್ಕೀಂ ಅಡಿ ೨೦ ಆಸನಗಳ ಸಾಮರ್ಥ್ಯದ ವಿಮಾನಗಳು ಇಳಿಯಲು ಮತ್ತು ಹಾರಾಟ ಮಾಡಲು ಒಂದು ಕಿಮೀ ರನ್ವೇಗೆ ಕೂಡಿಗೆ ಬಳಿಯ ಈ ಜಾಗ ಸೂಕ್ತ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮಿನಿ ವಿಮಾನ ನಿಲ್ದಾಣದ ಜೊತೆಗೆ ಕುಶಾಲನಗರದ ಆಸುಪಾಸಿನಲ್ಲಿಯೇ ಎವಿಯೇಷನ್ ತರಬೇತಿ ಅಕಾಡೆಮಿ ಸ್ಥಾಪಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದ್ದು, ಈ ಅಕಾಡೆಮಿಯಿಂದ ಕೊಡಗು, ಮೈಸೂರು,
(ಮೊದಲ ಪುಟದಿಂದ) ಹಾಸನ ಸೇರಿದಂತೆ ಸುತ್ತಲಿನ ವಿಮಾನ ಚಾಲನೆಯ ಆಕಾಂಕ್ಷಿಗಳಿಗೆ ತರಬೇತಿ ನೀಡಲು ಅನುಕೂಲವಾಗಲಿದೆ.
ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಬೇಗ ಮುಗಿದರೂ ಕೂಡ ವಾರದಲ್ಲಿ ಮೂರು ಬಾರಿ ೨೦ ಆಸನಗಳ ಸಾಮರ್ಥ್ಯದ ವಿಮಾನಗಳ ಸೇವೆಯಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಚಿತ್ರಣವೇ ಬದಲಾಗುತ್ತದೆ ಎಂದು ಕೊಡಗು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಶಕ್ತಿ ಗೆ ಹೇಳಿದರು. -ವರದಿ : ಕೆ.ಎಸ್.ಮೂರ್ತಿ