ಸೋಮವಾರಪೇಟೆ, ಮೇ ೨೮: ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯ ಮೂಲಕ ಕೊಡಗಿಗೆ ಕ್ರಿಟಿಕಲ್ ಕೇರ್ ಆಸ್ಪತ್ರೆ ಮಂಜೂರಾಗಿದ್ದು, ರೂ. ೨೫ ಕೋಟಿ ವೆಚ್ಚದಲ್ಲಿ ಮಡಿಕೇರಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ಆಯುಷ್ಮಾನ್ ಯೋಜನೆಯ ಮೂಲಕ ರಾಜ್ಯದ ಮೂರು ಜಿಲ್ಲೆಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಅವಕಾಶ ನೀಡಿದ್ದು, ಇದರಲ್ಲಿ ಕೊಡಗಿಗೂ ಸ್ಥಾನ ಲಭಿಸಿರುವುದು ಸಂತಸ ತಂದಿದೆ ಎಂದು ರಂಜನ್ ಅಭಿಪ್ರಾಯಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಈ ಹಿಂದೆ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಜಿಲ್ಲೆಯ ಜನತೆಗೆ ಉನ್ನತ ಮಟ್ಟದ ತುರ್ತು ಚಿಕಿತ್ಸಾ ಸೌಲಭ್ಯ ದೊರಕಿಸಲು ಅನುವಾಗುವಂತೆ ಕ್ರಿಟಿಕಲ್ ಕೇರ್ ಆಸ್ಪತ್ರೆ ಮಂಜೂರು ಮಾಡಿದೆ ಎಂದು ರಂಜನ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ ಅನುಮೋದನೆ ಪಡೆಯಲಾಗುವುದು ಎಂದು ಶಾಸಕರು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ವಾಹನಗಳ ಓಡಾಟ ಅಧಿಕವಾಗುತ್ತಿದ್ದು, ಅಂತರ್ ರಾಜ್ಯಗಳನ್ನು ಸಂಪರ್ಕಿಸುವ ಜಿಲ್ಲೆಯೂ ಆಗಿದೆ. ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು-ಮAಗಳೂರು ರಾಷ್ಟಿçÃಯ ಹೆದ್ದಾರಿಯೂ ಸಹ ಕೊಡಗಿನ ಮೂಲಕ ಹಾದು ಹೋಗಿದೆ. ವಾಹನಗಳ ದಟ್ಟಣೆಯಿಂದ ಅಪಘಾತಗಳು ಸಂಭವಿಸುವ ಸಂದರ್ಭ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವ ಬಗ್ಗೆ ಗಮನ ಸೆಳೆದ ಹಿನ್ನೆಲೆ ಜಿಲ್ಲೆಗೆ ಕ್ರಿಟಿಕಲ್ ಕೇರ್ ಆಸ್ಪತ್ರೆ ಮಂಜೂರಾಗಿದ್ದು, ಕೇಂದ್ರ ಸರ್ಕಾರ ೨೫ ಕೋಟಿ ಅನುದಾನ ನೀಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಅಪ್ಪಚ್ಚು ರಂಜನ್ ಹೇಳಿದರು.

(ಮೊದಲ ಪುಟದಿಂದ) ಮಡಿಕೇರಿ ಟೋಲ್‌ಗೇಟ್ ಬಳಿ ಇರುವ ಹಳೆ ಪ್ರವಾಸಿ ಮಂದಿರದ ಜಾಗದಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ೧೯೫೦ರಲ್ಲಿ ನಿರ್ಮಾಣವಾಗಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖಾ ಸಚಿವರ ಗಮನ ಸೆಳೆಯಲಾಗಿದೆ. ಹಳೆಯ ಕಟ್ಟಡವನ್ನು ಕೆಡವಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯ ಮುಂಭಾಗವಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ಫ್ಲೆöÊ ಓವರ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಜಿಲ್ಲಾಸ್ಪತ್ರೆಯಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಅಂಡರ್‌ಪಾಸ್ ಮಾರ್ಗವಿದ್ದು, ಮಹಿಳಾ ಆಸ್ಪತ್ರೆಯಿಂದ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ಫ್ಲೆöÊ ಓವರ್ ನಿರ್ಮಿಸಿದರೆ ಎಲ್ಲಾ ಆಸ್ಪತ್ರೆಗಳೂ ಒಂದೇ ಮಾರ್ಗದಡಿಯಲ್ಲಿ ಬರಲಿವೆ ಎಂದು ರಂಜನ್ ಅಭಿಪ್ರಾಯಿಸಿದರು.

ನೂತನ ಆಸ್ಪತ್ರೆಯು ೩ ಅಂತಸ್ತಿನ ಕಟ್ಟಡ ಹೊಂದಿರಲಿದ್ದು, ಕೆಳ ಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು. ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಈಗಾಗಲೇ ಪ್ರಗತಿಯಲ್ಲಿರುವ ೪೫೦ ಬೆಡ್ ಸಾಮರ್ಥ್ಯದ ಆಸ್ಪತ್ರೆ ಹಾಗೂ ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ಏಕಕಾಲದಲ್ಲಿ ಸಾರ್ವಜನಿಕರ ಬಳಕೆಗೆ ಒದಗಿಸುವ ಚಿಂತನೆ ಇದೆ ಎಂದು ಶಾಸಕರು ಹೇಳಿದರು.