ವೀರಾಜಪೇಟೆ, ಮೇ ೨೭: ಮೂರು ಗ್ರಾಮಗಳಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸುವ ಬೋಡ್ನಮ್ಮೆ ಶ್ರದ್ಧಾಭಕ್ತಿಯಿಂದ ಸಂಪನ್ನವಾಯಿತು.
ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳಲ್ಲಿ ನೆಲೆಸಿರುವ ವನ ಭದ್ರಕಾಳಿ ದೇವಿಗೆ ಬೋಡ್ನಮ್ಮೆ ಐದು ದಿನಗಳ ಕಾಲ ಆಚರಿಸಲಾಯಿತು. ಗ್ರಾಮಗಳಲ್ಲಿ ನೆಲೆಸಿರುವ ಭದ್ರಕಾಳಿ ದೇವಿಯು ಸಹೋದರಿಗಳೆಂಬ ಪ್ರತೀತಿ ಇದೆ. ದೇವಿಗಾಗಿ ಗ್ರಾಮಸ್ಥರು ವಿವಿಧ ವೇಷಭೂಷಣಗಳನ್ನು ಧರಿಸಿ ಮನೆ ಮನೆಗೆ ತೆರಳಿ ಗ್ರಾಮಸ್ಥರು ನೀಡುವ ಕಾಣಿಕೆಯನ್ನು ಸಂಗ್ರಹಿಸಿ ದೇವಿಗೆ ಅರ್ಪಿಸುವುದು ಹಬ್ಬದ ವಾಡಿಕೆಯಾಗಿದೆ.
ಹಬ್ಬದ ಮೊದಲ ದಿನದ ಹಗಲು ಪಟ್ಟಣಿ ಅಂದು ರಾತ್ರಿ ಮೂರು ಗ್ರಾಮಸ್ಥರು ಸೇರಿ ವನದಲ್ಲಿದ್ದ ದೇವಿಯನ್ನು ಉತ್ಸವ ಆಚರಿಸುವ ದೇಗುಲಕ್ಕೆ ತರಲಾಯಿತು. ದೇಗುಲಕ್ಕೆ ಬಂದ ಗ್ರಾಮಸ್ಥರು ದೇವಿಯ ಮುಂಭಾಗದಲ್ಲಿ ನಿಂತು ಪ್ರಾರ್ಥನೆಯೊಂದಿಗೆ ವೇಷವನ್ನು ಧರಿಸುತ್ತಾರೆ. ರಾತ್ರಿ ಮನೆಯಿಂದ ವಿವಿಧ ವೇಷಭೂಷಣವನ್ನು ಧರಿಸಿದ ವೇಷಧಾರಿಗಳು ಕಾಣಿಕೆಯನ್ನು ತಂದು ಸಂಜೆಯ ವೇಳೆಗೆ ದೇವಿಯ ಸನ್ನಿಧಿಗೆ ಕಾಣಿಕೆ ಒಪ್ಪಿಸಿದರು.
ಮರುದಿನ ಮಗ್ಗುಲದ ಮಾಚೇಟ್ಟಿ ಪಾರೆ ಎಂಬ ವಿಶಾಲವಾದ ಗದ್ದೆಯಲ್ಲಿ ಮೂರು ಗ್ರಾಮದಿಂದ ತಲಾ ಎರಡು ಕುದುರೆಗಳಂತೆ ಒಟ್ಟು ಆರು ಕುದುರೆಗಳು ಗ್ರಾಮಸ್ಥರೊಂದಿಗೆ ಆಗಮನವಾಯಿತು. ವಿವಿಧ ದೈವಗಳು ಕುದುರೆಗಳನ್ನು ಹೊತ್ತ ವೇಷಧಾರಿಗಳೊಂದಿಗೆ ದೈವನರ್ತನೆ ನಡೆದವು. ಮೂರನೇ ದಿನದ ರಾತ್ರಿ ದೇಗುಲದಲ್ಲಿ ತೆರೆ ಮಹೋತ್ಸವ ನಡೆಯಿತು. ನಾಲ್ಕನೇ ದಿನವು ಕುಂದ ಚೂಳೆಹಬ್ಬ ನಡೆಯಿತು. ಐದನೇ ದಿನವು ಮೂರು ಗ್ರಾಮಗಳ ಅಧಿದೇವತೆಯಾದ ಶ್ರೀ ಭದ್ರಕಾಳಿಗೆ ಮಹಾಪೂಜೆ ಸಲ್ಲಿಸಲಾಗಿ ಮಹಾ ಮಂಗಳಾರತಿ ನೆರವೇರಿತು. ಬಳಿಕ ಆಗಮಿಸಿದ ಸರ್ವ ಭಕ್ತರಿಗೆ ಪ್ರಸಾದ ವಿನಿಯೋಗ ನಡೆದು ೨ ವರ್ಷಕೊಮ್ಮೆ ನಡೆಯುವ ವಾರ್ಷಿಕ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಉತ್ಸವದಲ್ಲಿ ಐಮಂಗಲ ಗ್ರಾಮ ದೇವತಕ್ಕರಾದ ಬೊಳ್ಳಚಂಡ ಮುತ್ತಣ್ಣ, ಮಗ್ಗುಲ ಗ್ರಾಮದ ದೇವತಕ್ಕರಾದ ಕೊಟ್ಟಿಯಂಡ ಜೀವನ್ ಮತ್ತು ವೈಪಡ ಗ್ರಾಮದ ದೇವತಕ್ಕರಾದ ಪುಲಿಯಂಡ ಲೋಕೇಶ್ ಸೇರಿದಂತೆ, ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.