ಮಡಿಕೇರಿ, ಮೇ ೨೭: ರೈಲ್ವೆ ಇಲಾಖೆ ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಯೋಜನೆ ಪ್ರಾರಂಭಿಸಲು ಹೆಜ್ಜೆ ಇಟ್ಟಿದೆ. ಶ್ರವಣಬೆಳಗೊಳ-ಕುಶಾಲನಗರ ನಡುವಿನ ಹೊಸ ರೈಲು ಮಾರ್ಗದ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ಕಚೇರಿಗೆ ಈ ಕುರಿತು ನಿರ್ದೇಶಿಸಲಾಗಿದೆ. ಶ್ರವಣಬೆಳಗೊಳ-ಹೊಳೆನರಸೀಪುರ-ಕೊಣನೂರು-ಕುಶಾಲನಗರ ರೈಲು ಯೋಜನೆಗೆ ಸಮೀಕ್ಷೆ ನಡೆಸಲು ನಿರ್ದೇಶನ ಕೊಟ್ಟಿದೆ.
ರೈಲ್ವೆ ಬೋರ್ಡ್ ಯೋಜನಾ ನಿರ್ವಾಹಕ ಪಂಕಜ್ ಕುಮಾರ್ ತಾ. ೧೨ರಂದು ಈ ಕುರಿತು ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಕೊಡಗು ಜಿಲ್ಲೆಯ ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಮಾಡಲು ಸಮೀಕ್ಷೆ ನಡೆಸಲಾಗುತ್ತದೆ.
೧೧೭ ಕಿ. ಮೀ. ಮಾರ್ಗ: ರೈಲ್ವೆ ಇಲಾಖೆ ಪತ್ರದ ಅನ್ವಯ ನೂತನ ರೈಲು ಮಾರ್ಗ ೧೧೭ ಕಿ. ಮೀ. ಇರಲಿದೆ. ಸಮೀಕ್ಷೆಗಾಗಿ ಅಗತ್ಯ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಮಾರ್ಗ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಹಾಸನ ಜಿಲ್ಲೆ ಶ್ರವಣಬೆಳಗೊಳದಿಂದ ಹೊರಡುವ ರೈಲು ಹೊಳೆನರಸೀಪುರ, ಕೊಣನೂರು ಮಾರ್ಗವಾಗಿ ಕೊಡಗು ಜಿಲ್ಲೆಯ ಕುಶಾಲನಗರವನ್ನು ತಲುಪಲಿದೆ. ಈ ರೈಲು ಮಾರ್ಗದಿಂದ ಆಗುವ ಲಾಭ, ವೆಚ್ಚ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮೀಕ್ಷೆ ವರದಿ ತಯಾರು ಮಾಡಲಾಗುತ್ತದೆ.
ಈಗಾಗಲೇ ರೈಲ್ವೆ ಇಲಾಖೆ ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಭವಿಷ್ಯದಲ್ಲಿ ಈ ಎರಡು ರೈಲು ಮಾರ್ಗಗಳನ್ನು ಸಂಪರ್ಕಿಸುವ ಲೆಕ್ಕಾಚಾರ ಇಲಾಖೆ ಮುಂದಿವೆ. ೨೦೨೨-೨೩ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮೈಸೂರು-ಬೆಳಗೊಳ-ಕುಶಾಲನಗರ ರೈಲು ಯೋಜನೆಗೆ ೧೦೦ ಕೋಟಿ ರೂ. ಅನುದಾನ ನೀಡಿದ್ದರು. ೮೭.೨ ಕಿ. ಮೀ. ರೈಲು ಯೋಜನೆ ಇದಾಗಿದೆ. ಈ ಯೋಜನೆಗೆ ೧೮೫೪.೬೨ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ಭೂ ಸ್ವಾಧೀನ ಕಾರ್ಯ ಈಗಾಗಲೇ ನಡೆಯುತ್ತಿದೆ. ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ೨೦೧೯ರ ಪಿಂಕ್ ಬುಕ್‌ನಲ್ಲಿ ಈ ರೈಲು ಯೋಜನೆ ಪ್ರಸ್ತಾಪ ಮಾಡಿ ಅನುದಾನ ನೀಡಲಾಗಿತ್ತು.