ಮಡಿಕೇರಿ, ಮೇ ೨೭ : ಮೂರ್ನಾಡು ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಶ್ರೀ ಧರ್ಮಶಾಸ್ತಾವು ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಕೇರಳದ ಪ್ರಸಿದ್ಧ ಪ್ರತಿಷ್ಠಾಪನಾ ತಂತ್ರಿಗಳಾದ ಎಡಬಲತ ಕುಬೇರ ನಂಬೂದ್ರಿ ಪಾಡ್ ಅವರ ನೇತೃತ್ವದಲ್ಲಿ ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಶ್ರೀ ಧರ್ಮಶಾಸ್ತವು ಅಯ್ಯಪ್ಪ ದೇವಾಲಯ ಹಾಗೂ ಮಹಾಗಣಪತಿ, ನಾಗಸ್ಥಾನ, ನವಗ್ರಹ, ಕ್ಷೇತ್ರಪಾಲ ಹಾಗೂ ಶ್ರೀ ದೇವಿಯ ಕೂಟು ಮೂರ್ತಿಗಳ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದವು.
ತಾ. ೧೪ ರಂದು ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಪ್ರಾರ್ಥನಾ ಪೂಜೆ, ಶ್ರೀ ಭದ್ರಕಾಳಿ ದೇವಾಲಯದಲ್ಲಿ ಕಟ್ಟು ನಿಶ್ಚಯ ನಡೆಯಿತು. ತಾ. ೨೪ ರಂದು ಅಯ್ಯಪ್ಪ ದೇವಾಲಯದಲ್ಲಿ ವಾರ್ಷಿಕ ಉತ್ಸವ ಪ್ರಯುಕ್ತ ತಕ್ಕರಿಂದ ತೆಂಗಿನಕಾಯಿಗೆ ಗುಂಡು ಹೊಡೆದು ಕಟ್ಟು ಮುರಿಯಲಾಯಿತು. ನಂತರ ೨ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯ ನಡೆದವು.
ಸಂಜೆ ವಸಂತ ಉತ್ಸವ, ಧ್ವಜಾರೋಹಣ, ಕೂಟುಮೂರ್ತಿಗಳ ತೆರೆ, ತೋತ, ಕುಟ್ಟಿಚಾತ ತೆರೆ ನಡೆಯಿತು. ಅಲ್ಲದೆ ಭೈರವ ತೆರೆ, ಕರವಳ ಭಗವತಿ ತೆರೆ, ನುಚ್ಚಿಟೆ ತೆರೆ, ವಿಷ್ಣುಮೂರ್ತಿ ತೆರೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ವಾರ್ಷಿಕ ಉತ್ಸವದ ಪ್ರಯುಕ್ತ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.