ಮಡಿಕೇರಿ, ಮೇ ೨೭ : ೧೯ ಕರ್ನಾಟಕ ಬಿಎನ್ ಎನ್‌ಸಿಸಿ ವತಿಯಿಂದ ಕೂಡಿಗೆ ಸೈನಿಕ ಶಾಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ವಾರ್ಷಿಕ ತರಬೇತಿ ಶಿಬಿರ ನಡೆಯಿತು.
ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ನಾಯಕತ್ವದ ಗುಣ, ಶಿಸ್ತು, ಕರ್ತವ್ಯ ನಿಷ್ಠೆ, ಸಮಯಪಾಲನೆ, ಕ್ರಮಬದ್ಧತೆ, ನ್ಯಾಯಸಮ್ಮತ ಅಧಿಕಾರ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಮಟ್ಟವನ್ನು ಹೆಚ್ಚಿಸುವ ಬಗ್ಗೆ ಅರಿವು ಮೂಡಿಸಲಾಯಿತು. ಸಮಾಜ ಕಲ್ಯಾಣ, ಪರಿಸರ ಜಾಗೃತಿ, ಸಾಹಸ ಮತ್ತು ಮನರಂಜನಾ ಚಟುವಟಿಕೆಗಳಿಗೆ ಒತ್ತು ನೀಡಲಾಯಿತು. ಕೆಡೆಟ್‌ಗಳು ಧನಾತ್ಮಕವಾಗಿ ಮತ್ತು ಪರಿಣಾಮಕಾರಿ ಯಾಗಿ ತಮ್ಮ ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂದು ಪ್ರಮುಖರು ಹೇಳಿದರು.
ಎನ್‌ಸಿಸಿ ಮಡಿಕೇರಿಯ ಕಮಾಂಡಿAಗ್ ಆಫೀಸರ್ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ ಎನ್‌ಸಿಸಿಯ ಗುರಿ ಮತ್ತು ಧ್ಯೇಯವಾಕ್ಯ ಗಳ ಕುರಿತು ಮಾತನಾಡಿದರು. ಶಿಬಿರದ ಅವಧಿಯಲ್ಲಿ ಕೆಡೆಟ್‌ಗಳು ಅನುಸರಿಸಬೇಕಾದ ಜವಾಬ್ದಾರಿಗಳು, ಶಿಸ್ತು, ವೈಯಕ್ತಿಕ ನೈರ್ಮಲ್ಯ, ಭದ್ರತೆ ಮತ್ತಿತರ ವಿಚಾರಗಳ ಬಗ್ಗೆ ವಿವರಿಸಿದರು.
ಭಾರತೀಯ ಸೇನೆಗೆ ನೇಮಕಗೊಂಡಿರುವ ವಿರಾಜಪೇಟೆಯ ಕಾವೇರಿ ಕಾಲೇಜಿನ ಮಾಜಿ ಎನ್‌ಸಿಸಿ ಕೆಡೆಟ್ ಲೆಫ್ಟಿನೆಂಟ್ ಶರಣ್ಯ ರಾವ್ ಭಾರತೀಯ ಸೇನೆಗೆ ಪ್ರವೇಶಿಸುವ ವಿಧಾನ ಮತ್ತು ಎಸ್‌ಎಸ್‌ಬಿ ಸಂದರ್ಶನವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸಲಹೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ಮತ್ತು ಪದಕಗಳನ್ನು ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ತಾಲ್ಲೂಕು ಹಾಗೂ ಕೊಡಗು ಜಿಲ್ಲೆಯ ಸೀನಿಯರ್ ವಿಂಗ್ ಎನ್‌ಸಿಸಿ ಕೆಡೆಟ್‌ಗಳು ಮತ್ತು ಜೂನಿಯರ್ ವಿಂಗ್ ಕೆಡೆಟ್‌ಗಳು ಪಾಲ್ಗೊಂಡಿದ್ದರು. ಕೋವಿಡ್ ಕಾರಣದಿಂದ ಎರಡು ವರ್ಷ ಶಿಬಿರ ನಡೆದಿರಲಿಲ್ಲ.