ಗೋಣಿಕೊಪ್ಪಲು, ಮೇ ೨೭: ವಿದ್ಯಾಸಂಸ್ಥೆಯ ಏಳಿಗೆಗೆ ಅವಿರತ ಶ್ರಮಿಸಿದ ಕಾವೇರಿ ಕಾಲೇಜಿನ ಸ್ಥಾಪಕ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ ಶತಾಯುಷಿ ಬುಟ್ಟಿಯಂಡ ಅಪ್ಪಾಜಿಯವರಿಗೆ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಪ್ಪಾಜಿಯವರನ್ನು ಸನ್ಮಾನಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಚೆರಿಯಪಂಡ ಉತ್ತಪ್ಪ ಕಾಲೇಜಿನ ಅಭಿವೃದ್ಧಿಗೆ ಆರಂಭದಲ್ಲಿ ಸ್ಥಾಪಿಸಿದ ಆಡಳಿತ ಮಂಡಳಿಯಲ್ಲಿ ಅಪ್ಪಾಜಿಯವರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಗೋಣಿಕೊಪ್ಪ ಪ್ರೌಢಶಾಲೆ ವತಿಯಿಂದ ಹತ್ತು ಎಕರೆ ಜಾಗವನ್ನು ಕಾಲೇಜಿನ ಅಭಿವೃದ್ಧಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೆ ವಿದ್ಯಾಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ. ಕಾಲೇಜಿನ ಅಭಿವೃದ್ಧಿಗೆ ಇವರು ಹಾಕಿಕೊಟ್ಟ ಮಾರ್ಗವೇ ಕಾರಣ ಎಂದರು.
ಕಾಲೇಜಿನ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ ಮಾತನಾಡಿ, ೧೯೬೭ ರಲ್ಲಿ ಬುಟ್ಟಿಯಂಡ ಅಪ್ಪಾಜಿಯವರ ಸಮ್ಮುಖದಲ್ಲಿ ಕಾಲೇಜಿನ ೩೭ ಸದಸ್ಯರು ಸೇರಿ ಆಡಳಿತ ಮಂಡಳಿಯನ್ನು ರಚಿಸಿದ್ದರು. ಈ ಸಮಿತಿಯಲ್ಲಿ ಅಪ್ಪಾಜಿಯವರು ಉತ್ತಮ ಕೆಲಸ ನಿರ್ವಹಿಸಿದ್ದರು. ಇಂದಿಗೆ ಇವರು ಶತಾಯುಷಿಯಾಗಿ ನಮ್ಮೊಂದಿಗಿದ್ದಾರೆ. ಇವರ ಆದರ್ಶ ಗುಣಗಳು ಸಮಾಜಕ್ಕೆ ಮಾದರಿ ಎಂದರು. ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಇಟ್ಟಿರ ಕೆ. ಬಿದ್ದಪ್ಪ ಮಾತನಾಡಿ, ಗೋಣಿಕೊಪ್ಪ ನಗರವನ್ನು ವಿದ್ಯಾನಗರವನ್ನಾಗಿ ರೂಪಿಸಲು ಅಪ್ಪಾಜಿಯವರ ಕೊಡುಗೆ ಅಪಾರ. ಇವರ ನಿರ್ದೇಶನದಂತೆ ಗೋಣಿಕೊಪ್ಪ ನಗರವೂ ವಿದ್ಯಾನಗರವಾಗಿ ಮಾರ್ಪಟ್ಟಿದೆ. ಅಪರೂಪದ ವ್ಯಕ್ತಿತ್ವವುಳ್ಳ ಅಪ್ಪಾಜಿಯವರ ಸಾಮಾಜಿಕ ಕಳಕಳಿ ಸಮಾಜಕ್ಕೆ ಮಾದರಿ ಎಂದರು.
ಶತಾಯುಷಿ ಬುಟ್ಟಿಯಂಡ ಅಪ್ಪಾಜಿಯವರನ್ನು ಕಾಲೇಜಿನ ಎನ್‌ಸಿಸಿ ಘಟಕ ಗೌರವ ವಂದನೆ ನೀಡಿ ಬರಮಾಡಿಕೊಂಡಿತು. ನೂರು ವರ್ಷ ಪೂರೈಸಿದ್ದರೂ ಉತ್ತಮ ಭವಿಷ್ಯ ನಿರ್ಮಾಣ ಮಾಡಲು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಪ್ಪಾಜಿಯವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಸಿ.ಎಂ. ಅಚ್ಚಯ್ಯ, ಕುಲ್ಲಚಂಡ ಬೋಪಣ್ಣ, ಕೆ.ಎಂ. ಸುಬ್ರಮಣಿ, ಸಿ.ಎಂ. ಅಪ್ಪಯ್ಯ, ಬಿ.ಎ. ಚಂಗಪ್ಪ, ಕೆ.ಎಂ. ಬೆಳ್ಯಪ್ಪ, ಸೇರಿದಂತೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಎಂ.ಬಿ. ಕಾವೇರಪ್ಪ, ಪಾಲಿಟಿಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕೆ. ಶ್ರೀನಿವಾಸ್, ಕಾಲೇಜಿನ ಅಧೀಕ್ಷಕ ಸೋಮನಾಥ್, ಕಾಲೇಜಿನ ಉಪನ್ಯಾಸಕ ವೃಂದ, ಸಿಬ್ಬಂದಿವರ್ಗ, ಬುಟ್ಟಿಯಂಡ ಅಪ್ಪಾಜಿಯವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ ಸ್ವಾಗತಿಸಿ, ವಂದಿಸಿದರು.