ಆಲೂರು-ಸಿದ್ದಾಪುರ, ಮೇ ೨೭: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಸರಿಸುಮಾರು ೬೦ ವರ್ಷಗಳಿಂದ ಸುಮಾರು ೫೦ ಕುಟುಂಬಗಳು ಜೀವನ ಸಾಗಿಸುತ್ತಿವೆ.
ಪ್ರಾರಂಭದಲ್ಲಿ ಸಣ್ಣ ಸಣ್ಣ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದ ಇಲ್ಲಿಯವರು ನಂತರ ಹಂತ ಹಂತವಾಗಿ ಗುಡಿಸಲಿದ್ದ ಮನೆಗಳನ್ನು ಹೆಂಚಿನ ಮನೆಗಳಾಗಿ ಬದಲಾಯಿಸಿಕೊಂಡಿದ್ದಾರೆ. ಕೆಲವರು ಇಂದಿಗೂ ಗುಡಿಸಲಿನಲ್ಲಿದ್ದಾರೆ. ಆದರೆ ಈ ಗ್ರಾಮದಲ್ಲಿ ಸುಮಾರು ೫೦ಕ್ಕಿಂತಲು ಹೆಚ್ಚು ಮನೆಗಳಿದ್ದರು ಸರಿಯಾದ ರಸ್ತೆ ಇಲ್ಲದೆ ಗ್ರಾಮದ ಜನರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
೩ ಕಿ.ಮೀ. ಇರುವ ಈ ಗ್ರಾಮಕ್ಕೆ ರಸ್ತೆ ಡಾಂಬರು ಮಾಡಲು ಇನ್ನೂ ಸಾಧ್ಯವಾಗಿಲ್ಲ. ೨೦ ವರ್ಷಗಳ ಹಿಂದೆ ಒಮ್ಮೆ ೨೦೦ ಮೀ ರಸ್ತೆಯನ್ನು ಡಾಂಬರು ಮಾಡಲಾಗಿದೆ. ಅದಾದ ನಂತರ ಆ ರಸ್ತೆಯನ್ನು ಸರಿಪಡಿಸಲೇ ಇಲ್ಲ. ೨೦೨೧ರಲ್ಲಿ ಮತ್ತೆ ಗ್ರಾಮಸ್ಥರ ಮನವಿಯ ಮೇಲೆ ರೂ. ೧೦ ಲಕ್ಷ ಅನುದಾನ ಬಳಸಿ ೩ ಕಿ.ಮೀ. ರಸ್ತೆಯನ್ನು ಪ್ರಾರಂಭದಲ್ಲಿ ೩೦೦ ಮೀ., ಗ್ರಾಮದ ಕೊನೆಯಲ್ಲಿ ೩೦೦ ಮೀ. ಮಾಡಿ ಗ್ರಾಮಸ್ಥರ ಕಣ್ಣೊರೆಸುವ ಕೆಲಸ ಮಾಡಲಾಗಿದೆ.
ರಸ್ತೆಯುದ್ದಕ್ಕೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರೆಲ್ಲ ರಸ್ತೆಯಲ್ಲೆ ಹರಿಯುವುದರಿಂದ ಕೆಸರುಗದ್ದೆಯಂತಾಗಿರುತ್ತದೆ. ಇದರಿಂದ ತುರ್ತು ಸಂದರ್ಭದಲ್ಲಿ ಬಾಡಿಗೆ ವಾಹನಗಳನ್ನು ಕರೆದರೆ ಹೆಚ್ಚಿನ ದರ ನೀಡಬೇಕಾಗಿದೆ.
ಹಕ್ಕುಪತ್ರವಿಲ್ಲದೆ ಪರದಾಟ
ಈ ಗ್ರಾಮದ ಎಲ್ಲಾ ಕುಟುಂಬಗಳು ಪ್ರತಿನಿತ್ಯ ಭಯದಲ್ಲೆ ವಾಸ ಮಾಡುವಂತಾಗಿದೆ. ಕಾರಣ ಈ ಗ್ರಾಮದಲ್ಲಿ ವಾಸಿಸುವ ೫೦ ಕುಟುಂಬದವರು ಸರ್ವೆ ನಂಬರ್ ೪೮/೩ ಹಾಗೂ ೪೮/೬ ರ ಲ್ಲಿರುವ ೧೦೦ ಎಕರೆ ಖಾಲಿ ಗೋಣಿಬೆಟ್ಟದ ಪೈಸಾರಿ ಜಾಗವನ್ನು ಸುಮಾರು ಅಧÀð ಎಕರೆಯಿಂದ ೨ ಎಕರೆವರೆಗೆ ಬಳಸಿಕೊಂಡು ಕಾಫಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಆದರೆ ಆ ಜಾಗಗಳಿಗೆ ಇದೀಗ ಭದ್ರತೆ ಇಲ್ಲದಾಗಿದೆ.
ಈ ಜಾಗಗಳಿಗೆ ಹಕ್ಕುಪತ್ರವಿಲ್ಲದೆ ಪರಿತಪಿಸುತ್ತಿದ್ದಾರೆ. ಕಳೆದ ಸುಮಾರು ೫೦ ವರ್ಷಗಳಿಂದ ಈ ಜಾಗದ ಹಕ್ಕುಪತ್ರ ಪಡೆಯಲು ಸಂಬAಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸುತ್ತ ಬಂದರೂ ಸಹ ಯಾವುದೇ ಪ್ರಯೋಜನ ಈ ಗ್ರಾಮಸ್ಥರಿಗೆ ಕಾಣುತ್ತಿರಲಿಲ್ಲ. ಇದರಿಂದ ಈ ಹಕ್ಕುಪತ್ರದ ಕನಸು ಕನಾಸಾಗಿಯೆ ಇಂದಿಗೂ ಉಳಿದಿದೆ. ಇದೀಗ ಮನೆಗಾಗಿ ಹಕ್ಕು ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಗ್ರಾಮಸ್ಥರೆಲ್ಲ ಸೇರಿ ಸಂಬAಧಪಟ್ಟವರನ್ನು ಭೇಟಿ ಮಾಡಿ ಕೃಷಿ ಭೂಮಿಯ ತಮ್ಮ ಜಾಗಕ್ಕಾಗಿ ಹಕ್ಕುಪತ್ರ ಪಡೆಯಲು ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಈ ಗ್ರಾಮಸ್ಥರು ತಮಗೆ ಸರಳ ಸಮಾರಂಭಗಳನ್ನು ಮಾಡಲು ಸಮುದಾಯ ಭವನ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದರು. ಅದರಂತೆ ರೂ. ೬ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಭವನ ಕಳೆದ ೧೦ ವರ್ಷದಿಂದ ಅಧÀð ಕಾಮಗಾರಿಯಾಗಿ ನಿಂತಿದೆ.
ಪ್ರಾಥಮಿಕ ಶಿಕ್ಷಣಕ್ಕಾಗಿ ಸುಮಾರು ೨ ಕಿ.ಮೀ. ದೂರದ ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಬೇಕಾಗಿದ್ದು, ಗುಂಡಿಮಯ ರಸ್ತೆಯಲ್ಲಿ ತೆರಳಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಈ ಗ್ರಾಮದಲ್ಲಿ ೨-೩ ಮಂದಿ ಮಾತ್ರ ಸರ್ಕಾರಿ ಕೆಲಸವನ್ನು ಅಲಂಕರಿಸಿದ್ದು ಬಿಟ್ಟರೆ ಇನ್ನುಳಿದವರೆಲ್ಲರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುತ್ತಿದ್ದಾರೆ. ಇತರರು ಖಾಸಗಿ ಹಾಗೂ ಸ್ವಯಂ ಉದ್ಯೋಗಿಗಳಾಗಿದ್ದಾರೆ.
ಈ ಗ್ರಾಮದಿಂದ ಇಲ್ಲಿಯವರೆಗೆ ಗ್ರಾಮಪಂಚಾಯ್ತಿಗೆ ಒಬ್ಬರು ಆಯ್ಕೆಯಾಗಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈ ಗ್ರಾಮದಿಂದ ನಿಡ್ತ ಕೃಷಿ ಪತ್ತಿನ ಸಹಕಾರ ಸಂಘದ ಅಧÀ್ಯಕ್ಷರಾಗಿ ಇದೆ ಗ್ರಾಮದವರು ಆಯ್ಕೆಯಾಗಿದ್ದಾರೆ. ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಒಬ್ಬರಿದ್ದಾರೆ. ಅದು ಬಿಟ್ಟರೆ ರಾಜಕೀಯವಾಗಿ ಮುಂದೆ ಬಂದವರು ಯಾರು ಸಹ ಈ ಗ್ರಾಮದಲ್ಲಿಲ್ಲ.
ಗ್ರಾಮದ ಜನಸಂಖ್ಯೆ ಸುಮಾರು ೩೦೦ರಷ್ಟಿದ್ದು, ೧೬೦ ಮತದಾರರಿದ್ದಾರೆ. - ದಿನೇಶ್ ಮಾಲಂಬಿ