ಕೊಡ್ಲಿಪೇಟೆ, ಮೇ ೨೭: ಇಲ್ಲಿನ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಗ್ರಾಮ ಪಂಚಾಯಿತಿ, ಶಾಲೆ, ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.

ನೀರುಗುಂದ ಸರಕಾರಿ ಶಾಲೆಗೆ ನಲಿ-ಕಲಿ ಟೇಬಲ್ ಮತ್ತು ಚೇರ್, ಸರಕಾರಿ ಆಸ್ಪತ್ರೆಗೆ ವಾಟರ್ ಫಿಲ್ಟರ್ ಮತ್ತು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಕಸ ಸಂಗ್ರಹದ ದೊಡ್ಡ ಬುಟ್ಟಿಗಳನ್ನು ವಿತರಿಸಲಾಯಿತು. ರೋಟರಿ ರಾಜ್ಯಪಾಲ ರವೀಂದ್ರ ಭಟ್ ಅವರು ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿ, ಸಾರ್ವಜನಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವುದೆ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಕೊಡ್ಲಿಪೇಟೆ ಹೇಮಾವತಿ ಸಂಸ್ಥೆಯು ಈ ಭಾಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಆಯೋಜಿಸುವ ಮೂಲಕ ಸಮಾಜ ಕಾರ್ಯದಲ್ಲಿ ಸಕ್ರಿಯವಾಗಬೇಕು ಎಂದು ಅಭಿಪ್ರಾಯಿಸಿದರು.

ಸಮೀಪದ ನೀರುಗುಂದ ಸರಕಾರಿ ಶಾಲೆಗೆ ಹದಿನಾರು ಸಾವಿರ ಮೌಲ್ಯದ ನಲಿಕಲಿ ಟೇಬಲ್ ಮತ್ತು ಚೇರ್, ಸರಕಾರಿ ಪ್ರಾಥಮಿಕ ಆಸ್ಪತ್ರೆಗೆ ಹದಿನೆಂಟು ಸಾವಿರ ಮೌಲ್ಯದ ವಾಟರ್ ಫಿಲ್ಟರ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಹದಿನೆಂಟು ಸಾವಿರ ಮೌಲ್ಯದ ಕಸ ಸಂಗ್ರಹಣೆಯ ಹತ್ತು ಬುಟ್ಟಿಗಳನ್ನು ವಿತರಿಸಲಾಗಿದೆ ಎಂದು ಡಿ.ವಿ. ದಿನೇಶ್ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಉಪ ರಾಜ್ಯಪಾಲ ಅನಿಲ್ ಹೆಚ್.ಟಿ., ರೋಟರಿ ವಲಯ ಕಾರ್ಯದರ್ಶಿ ವಸಂತ್‌ಕುಮಾರ್, ವಲಯ ಸೇನಾನಿ ಪುರುಷೋತ್ತಮ, ಜಿಲ್ಲಾ ಖಜಾಂಚಿ ಜಯಪ್ರಕಾಶ್, ಹೇಮಾವತಿ ರೋಟರಿ ಕಾರ್ಯ ದರ್ಶಿ ಉಮೇಶ್ ಯು.ಹೆಚ್. ನಿಕಟಪೂರ್ವ ಅಧ್ಯಕ್ಷ ಹೆಚ್.ಎಂ. ದಿವಾಕರ್, ಹೇಮಾವತಿ ರೋಟರಿ ಪದಾಧಿಕಾರಿಗಳು, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಭಿತ್ ಗೌಡ ಮತ್ತು ಸದಸ್ಯರು ಗಳು, ಸರಕಾರಿ ಆಸ್ಪತ್ರೆಯ ವೈದ್ಯೆ ಡಾ. ತುಂಗಾ ಹಾಗೂ ಸಿಬ್ಬಂದಿಗಳು ನೀರುಗುಂದ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.