ಸುಂಟಿಕೊಪ್ಪ, ಮೇ ೨೬: ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ರಾಷ್ಟçಮಟ್ಟದಲ್ಲಿ ಕಾರ್ಯಾಚರಿಸುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಕೊಡಗು ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬಂದಿದೆ.
ಮಡಿಕೇರಿಯಲ್ಲಿ ಎಸ್.ಡಿ.ಟಿ.ಯುನ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾದರ್ ಪರಂಗಿಪೇಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಣ್ಣಾ ಶರೀಫ್ ಸುಂಟಿಕೊಪ್ಪ, ಉಪಾಧ್ಯಕ್ಷರಾಗಿ ರಝಾಕ್ ಮಡಿಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ರವೂಫ್ ಪಾಲಿಬೆಟ್ಟ, ಕಾರ್ಯದರ್ಶಿಯಾಗಿ ಹಸೀನಾ, ಕೋಶಾಧಿಕಾರಿಯಾಗಿ ಮೊಹಮ್ಮದ್ ಪೊನ್ನಪ್ಪಸಂತೆ, ಸದಸ್ಯರಾಗಿ ಫರೀದ್, ಹರ್ಷದ್, ಅಶ್ರಫ್, ಜಲೀಲ್, ಅಜೀಜ್, ಜಕ್ರಿಯಾ, ಯೂಸೂಫ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಚ ಅಣ್ಣಾ ಶೆರೀಫ್ ಅವರು, ಕೊಡಗಿನಲ್ಲಿ ಕಾಫಿ ಮತ್ತು ಕಾಳು ಮೆಣಸು ಹೆಚ್ಚಾಗಿ ಬೆಳೆಯುತ್ತಿದ್ದು, ಸ್ಥಳೀಯ ಮತ್ತು ಹೊರರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇಲ್ಲಿನ ತೋಟಗಳಲ್ಲಿ ದುಡಿಯುತ್ತಿದ್ದಾರೆ. ತೋಟಗಳಲ್ಲಿ ದುಡಿಯುವ ಕಾರ್ಮಿಕರು ವಿವಿಧ ರೀತಿಯಲ್ಲಿ ಜೀವ ಭಯವನ್ನು ಎದುರಿಸಿ ಬದುಕು ಸಾಗಿಸುವವರಾಗಿದ್ದಾರೆ. ಆನೆ, ಹುಲಿ ದಾಳಿಯಿಂದ ಮತ್ತು ಕಾಳು ಮೆಣಸು ಕೊಯ್ಲು ಸಂದರ್ಭದಲ್ಲಿ ಅಲ್ಯೂಮಿನಿಯಂ ಏಣಿಯಿಂದ ವಿದ್ಯುತ್ ಅಪಘಾತವಾಗಿ ನಡೆಯುವ ಆಕಸ್ಮಿಕ ಸಾವು ಇತ್ಯಾದಿ ಜೀವ ಭಯದಿಂದ ಸಾವನ್ನೇ ಸವಾಲಾಗಿ ಸ್ವೀಕರಿಸಿ ವೇತನ ಸಂಪಾದಿಸುವ ಭರದಲ್ಲಿ ತನ್ನ ಜೀವವನ್ನೇ ಕಾರ್ಮಿಕರು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಮಿಕರನ್ನು ಸಂಘಟಿಸಿ ಅವರ ಕ್ಷೇಮಾಭಿವೃದ್ಧಿಗಾಗಿ ಪೂರಕವಾಗಿರುವ ಕಾರ್ಮಿಕ ಕಲ್ಯಾಣ ಮಂಡಳಿಯ ಯೋಜನೆಗಳನ್ನು ಕಾರ್ಮಿಕರು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಲು ತೊಡಕಾದ ಎಲ್ಲಾ ಸಮಸ್ಯೆಗಳನ್ನು ಹೋರಾಟದಿಂದ ನಿವಾರಿಸುವ ಪ್ರಯತ್ನ ಮತ್ತು ಕಾರ್ಮಿಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಈ ಸಂಘಟನೆ ಕೊಡಗಿನಲ್ಲಿ ಕಾರ್ಯಾಚರಿಸಲಿದೆ ಎಂದು ಮಾಹಿತಿ ನೀಡಿದರು.
ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಖಲೀಲ್, ಪ್ರಧಾನ ಕಾರ್ಯದರ್ಶಿ ಸಫಿ ಇತರರು ಇದ್ದರು.