ಮಡಿಕೇರಿ,ಮೇ.೨೬; ಮಲೆನಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಹೊರತುಪಡಿಸಿದರೆ ಕಾಗದ ಚೀಲದಲ್ಲಿ ತರಕಾರಿ, ಹಣ್ಣು ಹಂಪಲು, ಮೀನು-ಮಾಂಸ ಇತ್ಯಾದಿಗಳನ್ನು ಕೊಂಡೊಯ್ಯಲಾಗುವದಿಲ್ಲ., ಪ್ಲಾಸ್ಟಿಕ್ ಬಿಟ್ಟರೆ ಪರ್ಯಾಯ ಮಾರ್ಗ ಯಾವದು.,? ಸಣ್ಣ ಪುಟ್ಟ ವ್ಯಾಪಾರಿಗಳ ಮೇಲೆ ದಂಡ ವಿಧಿಸುವದಕ್ಕಿಂತ ಮದುವೆ, ಸಮಾರಂಭ ನಡೆಸುವ ಛತ್ರಗಳು, ಊಟ ಸರಬರಾಜು ಮಾಡುವ ಕ್ಯಾಟರಿಂಗ್‌ನವರ ಮೇಲೆ ಕ್ರಮ ಕೈಗೊಳ್ಳಬೇಕು., ವ್ಯಾಪಾರಿ-ಗ್ರಾಹಕರಿಗೆ ದಂಡ ವಿಧಿಸುವ ಬದಲಿಗೆ ಪ್ಲಾಸ್ಟಿಕ್ ತಯಾರು ಮಾಡುವ ಸಂಸ್ಥೆಗಳನ್ನು ನಿಷೇಧಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವAತಾಗಬೇಕು., ಎಂಬಿತ್ಯಾದಿ ಮನವಿಗಳನ್ನು ಮಡಿಕೇರಿ ನಗರದ ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಮುಂದಿಟ್ಟರು.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಏರ್ಪಡಿಸಲಾಗಿದ್ದ ಪ್ಲಾಸ್ಟಿಕ್ ನಿಷೇಧ ಕುರಿತಂತೆ ಸಮಾಲೋಚನಾ ಸಭೆಯಲ್ಲಿ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಪೇಪರ್ ಚೀಲ ಆಗುವದಿಲ್ಲ

ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಮಾತನಾಡಿ; ಪ್ಲಾಸ್ಟಿಕ್ ನಿಷೇಧದ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೆ ಗ್ರಾಹಕರೂ ಕೂಡ ಈ ಬಗ್ಗೆ ತಿಳಿದುಕೊಳ್ಳಬೇಕು. ಕೆಲವರು ಯಾವದೋ ಕಾರ್ಯಕ್ರಮಗಳಿಗೆ ಬಂದವರು ಯಾವದೇ ಚೀಲಗಳಿಲ್ಲದೆ ತರಕಾರಿ, ಮೀನು-ಮಾಂಸ ಖರೀದಿಸಲು ಬರುತ್ತಾರೆ. ನಾವು ಕಾಗದಗಳಲ್ಲಿ ಕಟ್ಟಿ ಕೊಟ್ಟರೆ ಅದು ಹರಿದುಹೋಗುತ್ತದೆ ಎಂದು ಪ್ಲಾಸ್ಟಿಕ್ ಚೀಲಗಳನ್ನೇ ಕೇಳುತ್ತಾರೆ. ಕೊಡಗು ಮಲೆನಾಡು ಪ್ರದೇಶವಾಗಿರುವದರಿಂದ ಇಲ್ಲಿ ಕಾಗದದ ಚೀಲಗಳು ಆಗುವದಿಲ್ಲ, ಇದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ. ಗ್ರಾಹಕರಿಗೂ ಈ ಬಗ್ಗೆ ತಿಳುವಳಿಕೆ ನೀಡಬೇಕಿದೆ. ಪ್ಲಾಸ್ಟಿಕ್ ವಿಚಾರಕ್ಕಾಗಿಯೇ ಚರ್ಚೆ, ಗಲಾಟೆಗಳು ಆಗುತ್ತಿದ್ದು, ಇದನ್ನು ತಡೆಗಟ್ಟಬೇಕಿದೆ ಎಂದು ಹೇಳಿದರು.

ತಯಾರಿಕೆ ನಿಷೇಧಿಸಿ

ಚೇಂಬರ್‌ನ ಮಾಜಿ ಅಧ್ಯಕ್ಷ ಬಾಬುಚಂದ್ರ ಉಳ್ಳಾಗಡ್ಡಿ ಮಾತನಾಡಿ; ಪ್ಲಾಸ್ಟಿಕ್‌ನಿಂದ ತೊಂದರೆ ಇದೆ, ಆದರೆ ಇದಕ್ಕೆ ಪರ್ಯಾಯ ಏನು ಎಂಬದನ್ನು ತಿಳಿಯಪಡಿಸಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿದ್ದು, ಪ್ರವಾಸಿಗರು ಆಹಾರವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೊಂಡೊಯ್ದು ಎಸೆದು ಹೋಗುತ್ತಾರೆ, ಇದಕ್ಕಾಗಿ ವ್ಯಾಪಾರಿಗಳು-ಗ್ರಾಹಕರಿಗೆ ದಂಡ ವಿಧಿಸುವ ಬದಲಿಗೆ ಪ್ಲಾಸ್ಟಿಕ್ ತಯಾರು ಮಾಡುವ ಕಾರ್ಖಾನೆಗಳನ್ನು ಮುಚ್ಚಿಸಿದರೆ ಯಾವದೇ ಸಮಸ್ಯೆ ಇರುವದಿಲ್ಲ ಎಂದು ಸಲಹೆ ನೀಡಿದರು.

ಸಮಾರಂಭಗಳ ಮೇಲೆ ನಿಗಾ ಇರಲಿ

ವ್ಯಾಪಾರಿ ಶಿವಾಜಿ ಮಾತನಾಡಿ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಬಗ್ಗೆ ಮಾತ್ರ ಚರ್ಚೆಗಳಾಗುತ್ತಿವೆ. ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆಯಾಗುವ ಮದುವೆ, ಇನ್ನಿತರ ಸಮಾರಂಭಗಳು ನಡೆಯುವ ಛತ್ರಗಳು, ಊಟೋಪಚಾರಗಳನ್ನು ಸರಬರಾಜು ಮಾಡುವ ಕ್ಯಾಟರಿಂಗ್ ವ್ಯವಸ್ಥೆಗಳ ಬಗ್ಗೆಯೂ ಗಮನಹರಿಸಬೇಕಿದೆ. ಸಮಾರಂಭಗಳಲ್ಲಿ ಹೆಚ್ಚಿಗೆ ನೀರಿನ ಬಾಟಲಿಗಳು, ತಟ್ಟೆ, ಚಮಚಗಳನ್ನು ಬಳಸಲಾಗುತ್ತದೆ. ಅವರುಗಳಿಗೆ ಮೊದಲು ನೋಟೀಸ್ ನೀಡಿ ದೊಡ್ಡ ಮೊತ್ತದ ದಂಡ ವಿಧಿಸಬೇಕೆಂದು ಸಲಹೆ ಮಾಡಿದರು.

ಕಂಪೆನಿಗೆ ಮಾಹಿತಿ ನೀಡಬೇಕು

ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ಮಾತನಾಡಿ; ನಗರ ಸಭೆಯಿಂದ ಸಣ್ಣ ಅಂಗಡಿಗಳಿಗೆ ಮಾತ್ರ ದಾಳಿ ಮಾಡಿ ದಂಡ ವಿಧಿಸಲಾಗುತ್ತಿದೆ. ಇದು ಸರಿಯಲ್ಲ, ಬದಲಿಗೆ ಪ್ಲಾಸ್ಟಿಕ್ ತಯಾರು ಮಾಡುವ ಕಂಪೆನಿಗಳಿಗೆ ಮಾಹಿತಿ ನೀಡಬೇಕು, ತಯಾರು ಮಾಡದಂತೆ ನೋಟೀಸ್ ನೀಡಬೇಕೆಂದು ಹೇಳಿದರು.

ಹೊಂದಾಣಿಕೆ ಕೊರತೆ

ಚೇಂಬರ್ ನಿರ್ದೇಶಕ ಬಿ.ಎಂ.ರಾಜೇಶ್ ಮಾತನಾಡಿ, ಇಲ್ಲಿ ಹೊಂದಾಣಿಕೆಯ ಕೊರತೆ ಕಾಣುತ್ತಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಸಂಬAಧಿಸಿದAತೆ ನಗರಸಭೆಯವರು ವ್ಯಾಪಾರಿಗಳ ಸಭೆ ಕರೆದು ಮಾಹಿತಿ ನೀಡಬೇಕಿತ್ತು. ಗೊಂದಲ ಏರ್ಪಡುತ್ತಿರಲಿಲ್ಲ, ಆದರೆ, ಇದುವರೆಗೆ ಯಾವದೇ ಸಭೆ ಕರೆದಿಲ್ಲ. ಪ್ಲಾಸ್ಟಿಕ್ ನಿಷೇಧಕ್ಕೆ ಎಲ್ಲರ ಸಹಕಾರ ಇದೆ; ಆದರೆ, ಪರ್ಯಾಯ ಏನೆಂಬದನ್ನು ಪೂರ್ವಭಾವಿ ಸಭೆ ಕರೆದು ನಂತರ ನೋಟೀಸ್ ಜಾರಿ ಮಾಡಿದ್ದರೆ ಗೊಂದಲ ಇರುತ್ತಿರಲಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಪಾರವೇ ಕಷ್ಟ, ಅಂತಹದರಲ್ಲಿ ದಾಳಿ ಮಾಡಿದರೆ ಹೇಗೇ? ಕಾಗದ ಚೀಲಗಳಲ್ಲಿ ತರಕಾರಿ, ಮೀನು-ಮಾಂಸ ಕೊಂಡೊಯ್ಯಲು ಸಾಧ್ಯವಾಗುವದಿಲ್ಲ. ಪರ್ಯಾಯ ವ್ಯವಸ್ಥೆ ಬಗ್ಗೆ ತಿಳಿಸಬೇಕಿದೆ ಎಂದು ಹೇಳಿದರು.

ಪೂರ್ಣ ಮಾಹಿತಿ ಇಲ್ಲ

ಚೇಂಬರ್ ನಗರ ಅಧ್ಯಕ್ಷ ಎಂ.ಧನAಜಯ ಮಾತನಾಡಿ; ೨೦೧೬ರಿಂದ ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಗೆ ಬಂದಿದೆ. ಅದರಲ್ಲಿ ಇಂತಿಷ್ಟು ಮೈಕ್ರಾನ್ ಸಾಮರ್ಥ್ಯದ ಪ್ಲಾಸ್ಟಿಕ್ ಬಳಸಬಹುದೆಂಬ ನಿಯಮವಿತ್ತು. ಇದೀಗ ಎಲ್ಲ ತರಹದ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿ ಯಾರಿಗೂ ಇಲ್ಲ. ಕಾನೂನಿನ ನಿಯಮಗಳನ್ನೂ ತಿಳಿಸಿಲ್ಲ. ದಾಳಿ ಮಾಡಿ ದಂಡ ವಿಧಿಸಲಾಗುತ್ತಿದೆ, ಪ್ರತಿರೋಧ ಒಡ್ಡಿದಾಗ ಪೊಲೀಸರನ್ನು ಕರೆಸುತ್ತಾರೆ. ದಾಳಿ ಮಾಡಲು ನಗರಸಭೆಯವರಿಗೆ ಅಧಿಕಾರ ಇದೆಯಾ ಎಂಬ ಬಗ್ಗೆಯೂ ತಿಳಿದಿಲ್ಲ. ಈ ಗೊಂದಲಗಳನ್ನು ನಿವಾರಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಪ್ಯಾಕಿAಗ್‌ಗೆ ಅವಕಾಶ ಕೊಡಿ

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ; ಅಂಗಡಿಗಳಿAದ ಒಂದು ಕೆಜಿಯಷ್ಟು ಇರುಳ್ಳಿ, ಆಲೂಗೆಡ್ಡೆ., ಹೀಗೆ ಏನಾದರೊಂದು ಖರೀದಿಸುತ್ತಾರೆ. ಕನಿಷ್ಟ ಅವುಗಳನ್ನಾದರೂ ಪ್ಯಾಕ್ ಮಾಡಿ ಕೊಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಕೊಂಡೊಯ್ಯುವAತಿಲ್ಲ

ವ್ಯಾಪಾರಿಗಳ ಅಹವಾಲುಗಳನ್ನೆಲ್ಲ ಆಲಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಪ್ರತಿಕ್ರಿಯಿಸಿ, ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಪ್ಯಾಕಿಂಗ್ ಮಾಡಲು ಅವಕಾಶ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಹೇಳಿದರು. ಆದರೆ ಸಾಮಗ್ರಿಗಳನ್ನು ಕೊಂಡೊಯ್ಯಲು ಬೇರೆ ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ ಎಂದು ಮನವರಿಕೆ ಮಾಡಿದರು.

ರಾಜ್ಯದಲ್ಲಿ ಈ ಹಿಂದೆಯೇ ಪ್ಲಾಸ್ಟಿಕ್ ತಯಾರಿಕಾ ಸಂಸ್ಥೆಗಳನ್ನು ನಿಷೇಧಿಸಲಾಗಿದೆ. ಇದೀಗ ಹೊರಜಿಲ್ಲೆಗಳಿಂದ ಮತ್ತು ನಕಲಿ ತಯಾರಿಕಾ ಘಟಕಗಳು ಪ್ಲಾಸ್ಟಿಕ್ ತಯಾರಿಸಿ ಮಾರಾಟ ಮಾಡುತ್ತಿರುವದಾಗಿ ಹೇಳಿದರು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಎಲ್ಲರೂ ಜಾಗೃತೆ ವಹಿಸುವಂತೆ ಕೋರಿದರು.