*ಗೋಣಿಕೊಪ್ಪ, ಮೇ ೨೬: ರೂ. ೬ ಕೋಟಿ ೭೧ ಲಕ್ಷದ ಅನುದಾನದಲ್ಲಿ ಅಭಿವೃದ್ಧಿಗೊಂಡ ಮತ್ತು ಅಭಿವೃದ್ಧಿಗೊಳ್ಳಬೇಕಾದ ಜಲಜೀವನ್ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕಿನ ಅರುವತ್ತೊಕ್ಲು, ಬಿಟ್ಟಂಗಾಲ, ಹಾತೂರು, ಬಿ. ಶೆಟ್ಟಿಗೇರಿ, ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ನಾಂಗಾಲದಲ್ಲಿ ರೂ. ೬೩.೧೩ ಲಕ್ಷದಲ್ಲಿ ವಿ. ಬಾಡಗ ಗ್ರಾಮದಲ್ಲಿ ನಿರ್ಮಾಣ ವಾದ ೫ ಸಾವಿರ ಲೀ. ಟ್ಯಾಂಕ್ ಮತ್ತು ೪೧೦೦ ಮೀ. ಪೈಪ್ ಅಳವಡಿಕೆ ಯೊಂದಿಗೆ ೧೬೦ ಮನೆಗಳಿಗೆ ಜಲಜೀವನ್ ಯೋಜನೆಯ ಕುಡಿಯುವ ನೀರಿನ ವಿತರಣೆಗೆ ಚಾಲನೆ ನೀಡಲಾಯಿತು.

ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನಿರಾವರಿ ನಿಗಮದ ಅನುದಾನದಲ್ಲಿ ಗುಡ್ಡಮಾಡು ಕಾಲೋನಿಗೆ ೧೨೦೦ ಮೀಟರ್‌ನಲ್ಲಿ ರೂ. ೯೯ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನಡೆಸಿದರು.

ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಮುಗುಟಗೇರಿ, ಅರುವತ್ತೊಕ್ಲು, ಹಳ್ಳಿಗಟ್ಟು, ಹುದೂರು ಗ್ರಾಮಗಳಲ್ಲಿ ರೂ. ೧೯೬.೪೮ ಲಕ್ಷ ಅನುದಾನದಲ್ಲಿ ೭೮೩ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಯೋಜನೆಗೆ ಚಾಲನೆ ನೀಡಿದರು.

ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. ೧೨೮.೩೬ ಲಕ್ಷ ಜಲ ಜೀವನ್ ಯೋಜನೆಯ ಅನುದಾನದಲ್ಲಿ ಟಿ. ಶೆಟ್ಟಿಗೇರಿ, ಈಸ್ಟ್, ವೆಸ್ಟ್ ನೆಮ್ಮಲೆ, ಹರಿಹರ ಗ್ರಾಮಗಳಿಗೆ ರೂ. ೧೨೮.೩೬ ಲಕ್ಷಗಳಲ್ಲಿ ೩೧೪ ಮನೆಗಳಿಗೆ ಕುಡಿಯುವ ನೀರು ಕಲ್ಪಿಸುವ ನಿಟ್ಟಿನಲ್ಲಿ ಟ್ಯಾಂಕ್ ಮತ್ತು ಪೈಪ್ ಅಳವಡಿಕೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಹಾತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. ೧೮೨.೨ ಲಕ್ಷ ಅನುದಾನದಲ್ಲಿ ೩೯೨ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸುವ ಟ್ಯಾಂಕ್ ನಿರ್ಮಾಣ ಮತ್ತು ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳಿಗೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭ ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಸದಸ್ಯ ತೀತಮಾಡ ಲಾಲ ಭೀಮಯ್ಯ, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ತಾಲೂಕು ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಜಲ ಜೀವನ್ ಯೋಜನೆಯ ಇಂಜಿನಿಯರ್ ಯೋಗೇಶ್ ಗೌಡ, ಸಹಾಯಕ ಇಂಜಿನಿಯರ್ ಸುನೀಲ್, ಜಿ.ಪಂ. ಇಂಜಿನಿಯರ್ ಮಹಾದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧು ದೇವಯ್ಯ, ಕಾವೇರಿ ನಿರಾವರಿ ನಿಗಮದ ಇಂಜಿನಿಯರ್ ನವೀನ್ ಹಾಗೂ ಪ್ರಮುಖರಾದ ತೀತಮಾಡ ಕಿಟ್ಟು ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಸ್ಥರು ಹಾಜರಿದ್ದರು.