ಸಿದ್ದಾಪುರ, ಮೇ ೨೬: ವಾಲ್ನೂರು ಗ್ರಾಮ ಪಂಚಾಯಿತಿ ಕಟ್ಟಡವು ೧೯೯೫ರಲ್ಲಿ ನಿರ್ಮಾಣ ವಾಗಿದ್ದು, ಮಳೆ, ಗಾಳಿಗೆ ಕಟ್ಟಡವು ಶಿಥಿಲಗೊಂಡಿದ್ದು, ಪ್ರತೀ ವರ್ಷ ದುರಸ್ತಿ ಮಾಡಲಾಗುತ್ತಿತ್ತು. ಇದೀಗ ವಿವಿಧ ಅನುದಾನಗಳನ್ನು ಕ್ರೋಢೀಕರಿಸಿ ನೂತನ ಸುಸಜ್ಜಿತ ಪಂಚಾಯಿತಿ ಕಾರ್ಯಾಲಯಕ್ಕೆ ಭೂಮಿಪೂಜೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಾಲ್ನೂರು ಗ್ರಾ.ಪಂ. ಉಪಾಧ್ಯಕ್ಷರಾದ ಸುದಾ, ಪಿಡಿಓ ಲೋಕೇಶ್, ಸದಸ್ಯರಾದ ಗಣೇಶ್, ಭುವನೇಂದ್ರ, ಮನು ಮಹೇಶ್, ಜಮುನ, ದಮಯಂತಿ, ಜಲ ಇನ್ನಿತರರು ಹಾಜರಿದ್ದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ರೂ. ೩೫ ಲಕ್ಷ ವೆಚ್ಚದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿದೆ. ಅಲ್ಲದೆ ರೂ. ೧೪ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಕಸ ವಿಲೇವಾರಿ ಘಟಕ ಸೇವೆಗೆ ಸಜ್ಜಾಗಿದೆ. ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ಕೈಗೊಂಡ ಡಿಜಿಟಲ್ ಗ್ರಂಥಾಲಯ ಯೋಜನೆಯಲ್ಲಿ ಕೊಡಗು ಜಿಲ್ಲೆ ಶೇ. ೭೫ ರಷ್ಟು ಸಾಧನೆ ಮಾಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನಪಡೆದಿದೆ. ಇತ್ತೀಚೆಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದು, ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯವು ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.
ಪAಚಾಯಿತಿಗೆ ಡಿಜಿಟಲ್ ಗ್ರಂಥಾಲಯದ ಸ್ಪರ್ಷ
ಗ್ರಾಮದ ಪ್ರತಿಭಾನ್ವಿತರಿಗೆ ಹಾಗೂ ಪುಸ್ತಕ ಪ್ರೇಮಿಗಳಿಗಾಗಿ ರೂ. ೩ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ ಗೊಂಡಿದೆ.
ನೂತನ ವೈಜ್ಞಾನಿಕ ಕಸ ವಿಲೇವಾರಿ ಘಟಕ
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸತತ ಪ್ರಯತ್ನದ ಫಲವಾಗಿ ಇದೀಗ ವಾಲ್ನೂರು-ತ್ಯಾಗತ್ತೂರಿನಲ್ಲಿ ರೂ. ೧೪ ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ವೈಜ್ಞಾನಿಕ ಕಸ ವಿಲೇವಾರಿ ಘಟಕ ನಿರ್ಮಾಣ ವಾಗಿದೆ. ಕಸ ವಿಂಗಡಣೆಗಾಗಿ ಪ್ರತ್ಯೇಕ ಘಟಕಗಳನ್ನು ನಿರ್ಮಿಸಿದ್ದು, ಒಣ ಕಸ, ಹಸಿ ಕಸಗಳನ್ನು ಸುಲಭವಾಗಿ ಬೇರ್ಪಡಿಸ ಬಹುದಾಗಿದೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸ ಲಾಗುವುದು. ಮರುಬಳಕೆಯ ತ್ಯಾಜ್ಯಗಳನ್ನೂ ಕೂಡ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ.
ಗ್ರಾ.ಪA. ಅಧ್ಯಕ್ಷೆ ಅನಿತಾ ವಿ.ಎಸ್. ಮಾತನಾಡಿ, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಶಾಸಕರ ಅನುದಾನ ಹಾಗೂ ವಿಶೇಷ ಕಾಳಜಿಯಿಂದ ೧.೨೫ ಕೋಟಿಯ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೆ ಗ್ರಾಮ ಪಂಚಾಯಿತಿಗೆ ಯಾವುದೇ ಆದಾಯ ಮೂಲವಿಲ್ಲದಿದ್ದರೂ ಕೂಡ ನಮ್ಮ ಆಡಳಿತ ಮಂಡಳಿಯು ವಿವಿಧ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ವ್ಯಾಪ್ತಿಯ ಮೂಲಭೂತ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದರು.