ಮಡಿಕೇರಿ, ಮೇ ೨೫: ಕುಶಾಲನಗರ ತಾಲೂಕು ವಾಲ್ನೂರು- ತ್ಯಾಗತ್ತೂರು ಹೋಬಳಿಯ ಮೊಗೇರ ಸೇವಾ ಸಮಾಜದ ವತಿಯಿಂದ ೧ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಸಮಾರಂಭ ನಡೆಯಿತು.

ಸಮಿತಿಯ ಅಧ್ಯಕ್ಷ ಪಿ.ಟಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವಂತೆ ಕರೆ ನೀಡಿದರು.

ಕೊಡಗು ಜಿಲ್ಲೆಯಲ್ಲಿರುವ ಮೊಗೇರ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಖಡ್ಡಾಯವಾಗಿ ಉನ್ನತ ಶಿಕ್ಷಣ ನೀಡಬೇಕು. ಯಾವುದೇ ಕಾರಣಕ್ಕೂ ವ್ಯಾಸಂಗವನ್ನು ಮೊಟಕುಗೊಳಿಸ ಬಾರದು. ಆರ್ಥಿಕ ಸಂಕಷ್ಟ ಎದುರಾದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜಿಲ್ಲಾ ಮೊಗೇರ ಸಮಾಜ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಮೊಗೇರ ಸಮಾಜದ ಎಂ.ಬಿ. ಸೀನ ಅವರು ತಮ್ಮ ಅತ್ತೆಯ ಜ್ಞಾಪಕಾರ್ಥವಾಗಿ ರೂ. ೫ ಸಾವಿರ ಮೌಲ್ಯದ ನೋಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಲಲಿತ, ಉಪಾಧ್ಯಕ್ಷ ಹಾಗೂ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಸದಸ್ಯ ಪಿ.ಜಿ. ಗಣೇಶ್, ಕಾರ್ಯದರ್ಶಿ ಕುಮಾರಿ ರಮ್ಯಾ, ಖಜಾಂಚಿ ಮಂಜು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.