ಸಂಪಾಜೆ, ಮೇ ೨೫: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಪಾಜೆ ಹೋಬಳಿ ಘಟಕದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೧ ನೇ ಜಯಂತಿಯ ಅಂಗವಾಗಿ ದಲಿತರ ನಡಿಗೆ - ಜಾಗೃತಿಯೆಡೆಗೆ ಕಾರ್ಯಕ್ರಮ ಚೆಡಾವು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್. ಉದ್ಘಾಟಿಸಿ ಮಾತನಾಡಿ, ದೇಶದ ಸಮಸ್ತ ಜನರಿಗೂ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಅದನ್ನು ತಿಳಿಯುವುದು ಮತ್ತು ಇತರರಿಗೆ ತಿಳಿಸುವುದು ದಲಿತ ಸಂಘರ್ಷ ಸಮಿತಿಯ ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾವಂತ ಯುವ ಜನತೆ ನಮ್ಮೊಂದಿಗೆ ಸಹಕರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿ ತಾಲೂಕು ಸಂಚಾಲಕರಾದ ಶ್ರೀ ದೀಪಕ್ ಪೊನ್ನಪ್ಪ ಮಾತನಾಡಿ, ಈ ದೇಶದಲ್ಲಿ ಭವ್ಯವಾದ ಸಂವಿಧಾನ ಡಾ.ಬಿ.ಆರ್ ಅಂಬೇಡ್ಕರ್ ಅವರಿಂದ ರಚನೆಯಾಗಿದ್ದು, ಅದರಿಂದಲೇ ಪ್ರತಿಯೊಬ್ಬರ ಜೀವನ ಸುಗಮವಾಗಿ ಸಾಗುತ್ತಿದೆ. ನಾವೆಲ್ಲರೂ ಹೆಚ್ಚಿನ ಶಿಕ್ಷಣ ಪಡೆಯಬೇಕು, ಮತ್ತು ಸರಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು, ಇದಕ್ಕೆ ಬೇಕಾದ ಸಹಕಾರವನ್ನು ಸಂಘಟನೆಯ ವತಿಯಿಂದ ಮಾಡಲಾಗುವುದು. ಮಹಿಳೆಯರು ತಮಗೆ ಸಿಕ್ಕ ಮೀಸಲಾತಿಯನ್ನು ಬಳಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬೆಳೆಯಬೇಕು ಎಂದರು. ಮತ್ತೋರ್ವ ಅತಿಥಿಗಳಾಗಿ ಭಾಗವಸಿದ ಮಹಮ್ಮದ್ ಕುಂಞÂ ಕೊಯನಾಡು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಎನ್ನುವುದು ಕೇವಲ ಹೆಸರು ಮಾತ್ರ ಅಲ್ಲ ಶೋಷಿತರ, ಬಡವರ ಪಾಲಿನ ಶ್ರೇಷ್ಠವಾದ ಕೂಗು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಶ್ ಹೆಚ್.ಎನ್. ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಗಿರಿಜಾ ಮೋಹನ್ ಇದ್ದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು. ಪವಿತ್ರ ಸ್ವಾಗತಿಸಿ, ಸಂತೋಷ್ ಕುಮಾರ್ ಹೆಚ್.ಬಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.