ಸಿದ್ದಾಪುರ, ಮೇ ೨೫: ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವು ತಾ. ೩೧ ಹಾಗೂ ಜೂನ್ ೧ ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು, ಪೋಸ್ಟರ್ ಅನ್ನು ಪಟ್ಟಣದ ಕೋಫಿಯ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಸಮಿತಿ ಕಾರ್ಯದರ್ಶಿ ಪಿ.ಆರ್. ಭರತ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದು, ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ನಿರಂತರ ದಾಳಿಮಾಡುತ್ತ ಆರ್.ಎಸ್.ಎಸ್.ನ ಅಜೆಂಡಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು ಇದರ ವಿರುದ್ಧ ಸಿಪಿಐಎಂ ಪಕ್ಷವು ನಿರಂತರ ಹೋರಾಟಗಳನ್ನು ರೂಪಿಸಲಿದೆ ಎಂದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ವಿರುದ್ಧ ಸೃಷ್ಟಿಸುತ್ತಿರುವ ಷಡ್ಯಂತ್ರ ಆತಂಕಕಾರಿ. ಇಂದು ಭಯದ ವಾತಾವರಣದಲ್ಲಿ ಅಲ್ಪ ಸಂಖ್ಯಾತರು ಬದುಕುವ ಸ್ಥಿತಿ ನಿರ್ಮಾಣ ಮಾಡಿ ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕೆ ಸಜ್ಜಾಗುತ್ತಿದೆ. ಪಕ್ಷವು ಅಲ್ಪಸಂಖ್ಯಾತರಿಗೆ ಧೈರ್ಯ ತುಂಬುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಿದ್ದು, ಇದರ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಈ ಸಂದರ್ಭ ಪ್ರಮುಖರಾದ ಸಯ್ಯದ್ ಹಾಜಿ, ಹನೀಫ ಹಾಜಿ, ಮೊಯಿದ್ದೀನ್, ಉದಯ, ಚಂದ್ರನ್, ಶಿವರಾಮನ್, ಶಿವಪ್ಪ ನಾಯಕ, ನಾರಾಯಣ ಹಾಗೂ ಇನ್ನಿತರರಿದ್ದರು.