ಮಡಿಕೇರಿ, ಮೇ ೨೫: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್ಗಳಾಗಿ ಗುರುತಿಸಲ್ಪಟ್ಟಿದ್ದ ಇಬ್ಬರು ವ್ಯಕ್ತಿಗಳು ಅವರಿದ್ದ ಸ್ಥಳದಿಂದ ಗಡೀಪಾರು ಕ್ರಮಕ್ಕೆ ಒಳಗಾಗಿ ಇದೀಗ ಕೊಡಗಿಗೆ ಬಂದಿದ್ದಾರೆ.
ವಿಜಯಪುರದಲ್ಲಿ ಗ್ಯಾಂಬ್ಲಿAಗ್ ಅಡ್ಡೆ ನಡೆಸುತ್ತಿದ್ದು, ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದ ಅಲ್ಲಿನ ರೌಡಿಶೀಟರ್ ವೆಂಕಟೇಶ್ ಬಂಡಿಹೊಡ್ಡರ್ ಎಂಬಾತನನ್ನು ಪೊಲೀಸ್ ಇಲಾಖೆ ಗಡೀಪಾರು ಮಾಡಿದೆ. ಇದೀಗ ಆತ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದಿದ್ದಾನೆ. ತಾ. ೧೬ರಂದು ಇಲಾಖಾ ಕ್ರಮದಂತೆ ಈ ವ್ಯಕ್ತಿ ಸೋಮವಾರಪೇಟೆಗೆ ಬಂದಿದ್ದು, ಇಲ್ಲಿ ನೆಲೆಸಿದ್ದಾನೆ. ಇದೀಗ ಮತ್ತೊಬ್ಬ ವ್ಯಕ್ತಿ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ರಮೇಶ್ ವಿಜಯಕುಮಾರ್ ಕಾಳೆ ಎಂಬಾತನನ್ನು ಗಡೀಪಾರು ಮಾಡಿ ಅಲ್ಲಿನ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಇದರನ್ವಯ ಕಾನೂನಿನ ಅವಕಾಶದಂತೆ ಅಲ್ಲಿಂದ ಗಡೀಪಾರಾಗಿರುವ ಈತ ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಸೇರಲಿದ್ದಾನೆ. ಅಕ್ರಮ ಗಾಂಜಾ ಮಾರಾಟ, ಮಾದಕ ದ್ರವ್ಯ ನಿಷೇಧ ಕಾಯ್ದೆಯಡಿ ಈತನ ವಿರುದ್ಧ ೧೦ ಪ್ರಕರಣ ದಾಖಲಾಗಿದ್ದವು. ಜಾಮೀನು ಬಳಿಕವೂ ಅಕ್ರಮ ಚಟುವಟಿಕೆ ಮುಂದುವರಿಕೆ ಹಿನ್ನೆಲೆ ಈತನನ್ನು ಗಡೀಪಾರು ಮಾಡಿ ಆದೇಶಿಸಲಾಗಿದೆ. ಗಡೀಪಾರು ಕ್ರಮಕ್ಕೆ ಒಳಗಾದವರು ಕಾನೂನಿನ ಅವಕಾಶದಂತೆ ಸ್ಥಳ ಆಯ್ಕೆ ಮಾಡಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇದರಂತೆ ಅಲ್ಲಿನ ಠಾಣೆಯಿಂದ ಇವರು ಬರಲಿರುವ ಪೊಲೀಸ್ ಠಾಣೆಗೆ ಮಾಹಿತಿ ಬರುತ್ತದೆ. ಈ ವ್ಯಕ್ತಿಗಳು ಪ್ರತಿದಿನ ಇಲ್ಲಿನ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕಲ್ಲದೆ, ವಾಸಸ್ಥಳದ ವಿವರ ಇತ್ಯಾದಿಗಳನ್ನು ಒದಗಿಸಬೇಕಿರುವುದು ಕ್ರಮವಾಗಿದೆ. ಇವರ ಬಗ್ಗೆ ಸ್ಥಳೀಯ ಪೊಲೀಸರೂ ನಿಗಾ ವಹಿಸಲಿದ್ದಾರೆ.